ಟಾಕ್ಸಿಕ್ ಸಿನಿಮಾ ಘೋಷಣೆಯಾದ ದಿನದಿಂದಲೂ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಯಶ್ ಮತ್ತು ಕಿಯಾರಾ ಅಡ್ವಾಣಿ ಕಾಂಬಿನೇಷನ್‌ನ ತಬಾಹಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡವೀಗ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿ ಕೇಳಿಬಂದಿದೆ.
ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಮತ್ತು ಅರ್ಸ್ಲಾನ್ ನಿಜಾಮಿ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹೊಸ ಗೀತೆಗೆ ಸಿದ್ದಾರ್ಥ್ ಬಸ್ರೂರ್ ಧ್ವನಿಯಾಗಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಮೊದಲ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಮಿಂಚಿದ್ದರೆ, ಈ ಎರಡನೇ ಹಾಡಿನಲ್ಲಿ ಯಶ್ ಜೊತೆ ಬಾಲಿವುಡ್ ನಟಿ ತಾರಾ ಸುತಾರಿಯಾ ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿದೆ. ಈ ಕುತೂಹಲಕಾರಿ ಸಾಂಗ್ ಬಹುಶಃ ನಾಳೆಯೇ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.
ಇನ್ನು ಚಿತ್ರದ ಟ್ರೈಲರ್ ಬಿಡುಗಡೆ ಕುರಿತೂ ಗಾಂಧಿನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಬರುವ ಆಗಸ್ಟ್ 8 ರಂದು ಟಾಕ್ಸಿಕ್ ಚಿತ್ರದ ಭರ್ಜರಿ ಟ್ರೈಲರ್ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಹಲವು ತಾರೆಯರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ್ ಹಾಗೂ ಯಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರವಿ ಬಸ್ರೂರ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

