ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಆತಂಕ ಸೃಷ್ಟಿಯಾಗಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ನಟ ಸಲ್ಮಾನ್ ಖಾನ್ ತಮ್ಮದೇ ಆದ ವಿಶಿಷ್ಟ ಹಾಗೂ ಹಾಸ್ಯಭರಿತ ಶೈಲಿಯಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಅಭಿಮಾನಿಗಳ ಕಾಲೆಳೆಯುವ ರೀತಿಯಲ್ಲಿ ಕ್ಯಾಪ್ಷನ್ ಬರೆದು ಗಮನ ಸೆಳೆದಿದ್ದಾರೆ.
ಸಲ್ಮಾನ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಂಡು, ‘ನಿಮ್ಮಲ್ಲರ ಆರೋಗ್ಯ ಹೇಗಿದೆ?’ ಎಂದು ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಚರ್ಚೆ ಮಾಡುತ್ತಿದ್ದವರಿಗೆ ಸಲ್ಮಾನ್ ಖಾನ್ ಈ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಸೆಕ್ಷನ್ನಲ್ಲಿ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದು, ನಟಿ ಮಹಿ ವಿಜ್ ಸೇರಿದಂತೆ ಹಲವರು ನಗುವಿನ ಎಮೋಜಿಗಳೊಂದಿಗೆ ಕಮೆಂಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಮುಂಬೈನ ಸ್ಲಂ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಹೊಸ ಐಟಿ ಸರ್ವರ್ ರೂಮ್ ಉದ್ಘಾಟನಾ ಸಮಾರಂಭದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಈ ವೇಳೆ ಅವರು ಫಲಾನುಭವಿಗಳಿಗೆ ಮನೆಯ ಕೀಲಿಗಳನ್ನು ಸಹ ಹಸ್ತಾಂತರಿಸಿದ್ದರು. ಆದರೆ ಈ ಕಾರ್ಯಕ್ರಮದ ವಿಡಿಯೋಗಳು ವೈರಲ್ ಆದಾಗ, ಅದರಲ್ಲಿ ಸಲ್ಮಾನ್ ಖಾನ್ ತೀರಾ ತೆಳ್ಳಗೆ, ಸುಸ್ತಾದಂತೆ ಮತ್ತು ವಯಸ್ಸಾದವರಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ‘ನಮ್ಮ ಹೀರೋಗೆ ಏನಾಗಿದೆ?’, ‘ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಎಲ್ಲಾ ಮುಸುಕಿನ ಚರ್ಚೆಗಳಿಗೆ ಸಲ್ಮಾನ್ ಖಾನ್ ಈಗ ತಮ್ಮ ಪೋಸ್ಟ್ ಮೂಲಕ ತೆರೆ ಎಳೆದಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ‘ರಾಜಾ ಶಿವಾಜಿ’ ಚಿತ್ರದಲ್ಲಿ ಜೀವಾ ಮಹಾಲಾ ಪಾತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ಸದ್ಯ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಅಪೂರ್ವ ಲಾಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್, ಮುಖೇಶ್ ರಿಷಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಲ್ಮಾ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ.

