ಸಂಸತ್ ಬಜೆಟ್ ಅಧಿವೇಶನ: ಸಂಸದರ ಹಾಜರಾತಿ ಮತ್ತು ಹೊಣೆಗಾರಿಕೆಯ
ಬೆಂಗಳೂರು-ಚುನಾಯಿತ ಪ್ರತಿನಿಧಿಗಳು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವುದು ಕೇವಲ ಅವರ ಕರ್ತವ್ಯವಲ್ಲ, ಬದಲಿಗೆ ಅವರ ಮೇಲಿರುವ ಸಾರ್ವಜನಿಕ ಹೊಣೆಗಾರಿಕೆಯ ಸಂಕೇತವಾಗಿದೆ.
ಆದರೆ, ಇತ್ತೀಚಿನ ಬಜೆಟ್ ಅಧಿವೇಶನದ ಹಾಜರಾತಿ ದತ್ತಾಂಶಗಳನ್ನು ಗಮನಿಸಿದಾಗ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಂಸದರ ಗೈರುಹಾಜರಿ ಆತಂಕಕಾರಿ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
ರಾಧಾಕೃಷ್ಣ ದೊಡ್ಡಮನಿ (ಕಲಬುರಗಿ)
ಒಟ್ಟು ೩೧ ಕಲಾಪಗಳ ಪೈಕಿ ಇವರು ಒಂದೇ ಒಂದು ದಿನವೂ ಹಾಜರಾಗದೆ ಶೂನ್ಯ (0%) ಹಾಜರಾತಿ ದಾಖಲಿಸಿದ್ದಾರೆ. ಕುಟುಂಬದ ಸದಸ್ಯರ ಅನಾರೋಗ್ಯ ಮತ್ತು ವೈಯಕ್ತಿಕ ಆರೋಗ್ಯದ ಕಾರಣಗಳನ್ನು ಇದಕ್ಕೆ ನೀಡಲಾಗಿದ್ದರೂ, ಇಡೀ ಅಧಿವೇಶನಕ್ಕೆ ಗೈರಾಗಿರುವುದು ಸಂಸದೀಯ ಇತಿಹಾಸದಲ್ಲಿ ಗಮನಾರ್ಹ ನಕಾರಾತ್ಮಕ ದಾಖಲೆಯಾಗಿದೆ.
ಪ್ರಿಯಾಂಕಾ ಸತೀಶ್ ಜಾರಕಿಹೊಳಿ (ಚಿಕ್ಕೋಡಿ/ಬೆಳಗಾವಿ)
ಇವರು ೩೧ ಕಲಾಪಗಳಲ್ಲಿ ಕೇವಲ ೧೩ ದಿನ ಮಾತ್ರ ಭಾಗವಹಿಸಿ ಶೇ ೪೧.೯ ರಷ್ಟು ಕಡಿಮೆ ಹಾಜರಾತಿ ಹೊಂದಿದ್ದಾರೆ.
ಉತ್ತಮ ಸಾಧಕರು (ಶೇ ೯೦+)-
ಡಾ. ಸಿ.ಎನ್. ಮಂಜುನಾಥ್, ಡಾ. ಕೆ. ಸುಧಾಕರ್, ಮತ್ತು ಶ್ರೇಯಸ್ ಎಂ. ಪಟೇಲ್ ಅವರು ಅತ್ಯುತ್ತಮ ಬದ್ಧತೆ ಪ್ರದರ್ಶಿಸಿದ್ದಾರೆ.
ಮಧ್ಯಮ ಸಾಧಕರು (ಶೇ ೭೦ – ೯೦)- ತೇಜಸ್ವಿ ಸೂರ್ಯ, ಜಗದೀಶ್ ಶೆಟ್ಟರ್, ಮತ್ತು ಯದುವೀರ್ ಒಡೆಯರ್ ಸೇರಿದಂತೆ ಹಲವರು ಸಾಧಾರಣ ಹಾಜರಾತಿ ಕಾಯ್ದುಕೊಂಡಿದ್ದಾರೆ.
ಕನಿಷ್ಠ ಮಟ್ಟಕ್ಕಿಂತ ಕಡಿಮೆ (ಶೇ ೭೦ ಕ್ಕಿಂತ ಕಡಿಮೆ)- ಪ್ರಭಾ ಮಲ್ಲಿಕಾರ್ಜುನ್, ಬಸವರಾಜ ಬೊಮ್ಮಾಯಿ, ಸುನೀಲ್ ಬೋಸ್ ಮತ್ತು ಬಿ.ವೈ. ರಾಘವೇಂದ್ರ ಅವರ ಹಾಜರಾತಿ ತೃಪ್ತಿಕರವಾಗಿಲ್ಲ.
ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್’ ಬಿಡುಗಡೆ ಮಾಡಿದ ದತ್ತಾಂಶಗಳು ಸಂಸತ್ತಿನ ಒಟ್ಟಾರೆ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ.
ಲೋಕಸಭೆಯ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು (ಸುಮಾರು ಶೇ ೩೬) ಸಂಸದರು ಶೇ ೭೫ ರಷ್ಟು ಕನಿಷ್ಠ ಹಾಜರಾತಿಯನ್ನು ತಲುಪಲು ವಿಫಲರಾಗಿದ್ದಾರೆ. ಇದು ಇಡೀ ಸದನದ ಗಂಭೀರತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ.
ಪ್ರಾದೇಶಿಕ ಪಕ್ಷ
ವರದಿಯ ಪ್ರಕಾರ ಪ್ರಾದೇಶಿಕ ಪಕ್ಷಗಳು ಮತ್ತು ನಿರ್ದಿಷ್ಟ ರಾಜ್ಯಗಳ ನಡುವೆ ಹಾಜರಾತಿಯಲ್ಲಿ ದೊಡ್ಡ ಕಂದಕವಿದೆ.
ಅತ್ಯುತ್ತಮ ಪ್ರದರ್ಶನ
ಉತ್ತರಾಖಂಡದ ಸಂಸದರು ಸರಾಸರಿ ೩೦.೫ ದಿನಗಳ ಗರಿಷ್ಠ ಹಾಜರಾತಿಯೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳು ಇದರ ಬೆನ್ನಿಗಿವೆ. ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ಲಕ್ಷದ್ವೀಪದ ಪ್ರತಿನಿಧಿಗಳು ಶೇ ೧೦೦ ರಷ್ಟು ಹಾಜರಾತಿ ದಾಖಲಿಸಿದ್ದಾರೆ.
ದಕ್ಷಿಣ ಭಾರತದ ಹಿನ್ನಡೆ
ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರಪ್ರದೇಶ (ಸರಾಸರಿ ೨೭.೪೧ ದಿನಗಳು) ಮಾತ್ರ ಮೊದಲ ಹತ್ತು ಸ್ಥಾನಗಳಲ್ಲಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳು ಹಿಂದುಳಿದಿವೆ.
ಕಳಪೆ ಪ್ರದರ್ಶನ
ಅಸ್ಸಾಂ ರಾಜ್ಯದ ಸಂಸದರು ಅತ್ಯಂತ ಕಡಿಮೆ (ಸರಾಸರಿ ೧೫.೬೯ ದಿನಗಳು) ಹಾಜರಾತಿ ಹೊಂದಿದ್ದಾರೆ.
ಪ್ರಮುಖ ಪಕ್ಷಗಳ ಗೈರುಹಾಜರಿ
ಲೋಕಸಭೆಯಲ್ಲಿ ದೊಡ್ಡ ಸಂಖ್ಯೆ ಹೊಂದಿರುವ ತೃಣಮೂಲ ಕಾಂಗ್ರೆಸ್ (AITC – ಸರಾಸರಿ ೧೫ ದಿನ) ಮತ್ತು ಡಿಎಂಕೆ (DMK – ಸರಾಸರಿ ೧೪.೬೪ ದಿನ) ಪಕ್ಷಗಳ ಸಂಸದರ ಗೈರುಹಾಜರಿ ಎದ್ದು ಕಾಣುತ್ತಿದೆ. ಆದರೆ ರಾಜ್ಯಸಭೆಯಲ್ಲಿ ಡಿಎಂಡಿಕೆ (DMDK) ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನಂತಹ ಸಣ್ಣ ಪ್ರಾದೇಶಿಕ ಪಕ್ಷಗಳು ಉತ್ತಮ ಹಾಜರಾತಿ (ಶೇ ೯೪ – ೧೦೦) ಕಾಯ್ದುಕೊಂಡಿವೆ.
ಸಂಸತ್ತಿನ ಮುಂಗಾರು ಅಧಿವೇಶನವು ದೇಶದ ಕಾನೂನುಗಳು, ಆರ್ಥಿಕ ನೀತಿಗಳು ಮತ್ತು ಪ್ರಮುಖ ಆಡಳಿತಾತ್ಮಕ ವಿಷಯಗಳ ಚರ್ಚೆಗೆ ವೇದಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಸದರ ಗೈರುಹಾಜರಿ ಈ ಕೆಳಗಿನ ಪರಿಣಾಮಗಳನ್ನು ಬೀರುತ್ತದೆ.
ಪ್ರಜಾಪ್ರಭುತ್ವದ ಮೌಲ್ಯಚ್ಯುತಿ: ಲಕ್ಷಾಂತರ ಮತದಾರರು ತಮ್ಮ ಕ್ಷೇತ್ರದ ಧ್ವನಿಯಾಗಲಿ ಎಂದು ಆರಿಸಿ ಕಳುಹಿಸಿದ ಪ್ರತಿನಿಧಿಗಳು ಸದನಕ್ಕೆ ಗೈರಾದಾಗ ಆ ಕ್ಷೇತ್ರದ ಜನರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ.
ಹಣದ ಪೋಲು: ಸಂಸತ್ತಿನ ಪ್ರತಿ ನಿಮಿಷದ ಕಲಾಪಕ್ಕೂ ಸಾರ್ವಜನಿಕರ ತೆರಿಗೆ ಹಣ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಸಂಸದರ ಗೈರುಹಾಜರಿ ಮತ್ತು ಗದ್ದಲಗಳಿಂದ ಕಲಾಪ ಮುಂದೂಡಿಕೆಯಾಗುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
ರಾಷ್ಟ್ರೀಯ ಪಕ್ಷಗಳಿಗಿಂತ ಕೆಲವು ಸಣ್ಣ ಪ್ರಾದೇಶಿಕ ಪಕ್ಷಗಳು ಉತ್ತಮ ಹಾಜರಾತಿ ತೋರಿರುವುದು, ದೊಡ್ಡ ಪಕ್ಷಗಳ ಸಂಸದರಲ್ಲಿ ಸಂಸದೀಯ ಹೊಣೆಗಾರಿಕೆಯ ಕೊರತೆ ಇರುವುದನ್ನು ಬಿಂಬಿಸುತ್ತದೆ.
ವೈಯಕ್ತಿಕ ಮತ್ತು ಆರೋಗ್ಯದ ಕಾರಣಗಳು ಕೆಲವೊಮ್ಮೆ ಅನಿವಾರ್ಯವಾಗಿದ್ದರೂ, ಒಟ್ಟಾರೆ ಸಂಸತ್ತಿನ ಹಾಜರಾತಿ ಕುಸಿಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಂಬರುವ ದಿನಗಳಲ್ಲಿ ಸಂಸದರ ಕನಿಷ್ಠ ಹಾಜರಾತಿಯನ್ನು ಕಡ್ಡಾಯಗೊಳಿಸುವ ಅಥವಾ ಗೈರುಹಾಜರಿಗೆ ಕಠಿಣ ನಿಯಮಗಳನ್ನು ತರುವ ಕುರಿತು ಸಂಸತ್ತು ಯೋಚಿಸಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ.
ಸದನ- ಶೇ ೯೦ ರಿಂದ ೧೦೦ ರಷ್ಟು ಹಾಜರಾತಿ ಹೊಂದಿದವರು- ಶೇ ೭೫ ರಷ್ಟು ಕನಿಷ್ಠ ಮಿತಿ ತಲುಪಿದವರು
ಲೋಕಸಭೆ-ಶೇ ೪೫.೭೬ ರಷ್ಟು ಸಂಸದರು-ಶೇ ೬೩.೯೮ ರಷ್ಟು ಸಂಸದರು (೩೦೯ ಸಂಸದರು)
ರಾಜ್ಯಸಭೆ -ಶೇ ೪೬.೬೭ ರಷ್ಟು ಸಂಸದರು-ಶೇ ೬೨.೩೫ ರಷ್ಟು ಸಂಸದರು

