HomeLatest Newsಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ದುಬಾರಿ: ರೈತರು ಏನು ಮಾಡಬೇಕು?

ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ದುಬಾರಿ: ರೈತರು ಏನು ಮಾಡಬೇಕು?

ಅಡಿಕೆ ಬೆಳೆಯುವ ಮಲೆನಾಡು ಹಾಗೂ ಕರಾವಳಿ ಭಾಗದ ರೈತರನ್ನು ಎಲೆಚುಕ್ಕೆ ರೋಗ ಕಂಗಾಲಾಗಿಸಿದೆ. ಈ ರೋಗದ ನಿಯಂತ್ರಣ ಅಷ್ಟು ಸುಲಭದ ಮಾತಲ್ಲ. ರೋಗ ನಿಯಂತ್ರಣ ದುಬಾರಿಯೂ ಆಗಿದ್ದು, ಸಣ್ಣ, ಮಧ್ಯಮ ವರ್ಗದ ರೈತರು ಆತಂಕಗೊಂಡಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣ ಮತ್ತು ಇತರೆ ವಿಷಯ ಕುರಿತು ಚರ್ಚಿಸಲು ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

“ಮಲೆನಾಡು ಪ್ರದೇಶದಲ್ಲಿ ತೀವ್ರತರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದು ಹತೋಟಿ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅತಿ ಅವಶ್ಯಕವಾಗಿದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಮಳೆಗಾಲದಲ್ಲಿ ಹೆಚ್ಚಾಗಿ ಹರಡುವ ಎಲೆ ಚುಕ್ಕೆ ರೋಗ ನಿಯಂತ್ರಣ ದುಬಾರಿಯಾಗಿದೆ. ರೋಗ ನಿಯಂತ್ರಣ ಕ್ರಮಕ್ಕೆ ಕೇಂದ್ರ ಮತ್ತು ರಾಜ್ಯ ಕ್ರಮವಾಗಿ ಶೇ.60 ಮತ್ತು 40 ಹಣ ನೀಡಲು ಸಿದ್ದವಿದ್ದು, ಮುಖ್ಯವಾಗಿ ರೋಗ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಅಭಿಪ್ರಾಯ ಮತ್ತು ಮಾರ್ಗದರ್ಶನದ ಮೇಲೆ ಮಾರ್ಗಸೂಚಿಯನ್ನು ತಯಾರಿಸಲಾಗುತ್ತಿದೆ” ಎಂದು ಹೇಳಿದರು.

“ಇಲಾಖೆಗಳು, ಗ್ರಾ.ಪಂ, ಸಹಕಾರ ಸಂಘಗಳು, ಅಡಿಕೆ ಮಾರಾಟ ಸಹಕಾರ ಸಂಘಗಳ ಮೂಲಕ ರೈತರಿಗೆ ಈ ರೋಗ ನಿಯಂತ್ರಣ ಮತ್ತು ವಿಜ್ಞಾನಿಗಳು ತಯಾರಿಸಿದ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಅರ್ಧ, ಮುಕ್ಕಾಲು ಎಕರೆ ಹೊಂದಿರುವ ಸಣ್ಣ ಸಣ್ಣ ರೈತರಿಗೆ ಈ ರೋಗದಿಂದಾಗಿ ತುಂಬಾ ತೊಂದರೆಯಾಗುತ್ತಿದ್ದು ರೋಗ ನಿಯಂತ್ರಣಕ್ಕಾಗಿ ಎಲ್ಲರೂ ಸೇರಿ ಒಂದು ತಂಡವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕರಿಸಬೇಕು” ಎಂದು ಸಚಿವರು ಕರೆ ನೀಡಿದರು.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ಎಲೆ ಚುಕ್ಕೆ ರೋಗ ತಡೆಗಟ್ಟಲು ಕೇವಲ ಔಷಧ ಸಿಂಪಡಣೆ ಮಾತ್ರವಲ್ಲದೇ ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.

ಕೃಷಿಕರು ಕೈಗೊಳ್ಳಬೇಕಾದ ಕ್ರಮಗಳು

  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮರಗಳಿಗೆ ಸರಿಯಾದ ಪೋಷಕಾಂಶವುಳ್ಳ ಆಹಾರ ನೀಡುವುದು.
  • ರೋಗವನ್ನು ತಡೆಗಟ್ಟಲು ಪೊಟ್ಯಾಷ್ ಗೊಬ್ಬರ ಅತೀ ಮುಖ್ಯ. ಪ್ರತಿ ಮರಕ್ಕೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೊಟ್ಯಾಷ್ ನೀಡುವುದರಿಂದ ಮರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  • ಎಲೆಚುಕ್ಕಿ ರೋಗದ ಕಣಗಳು ಗಾಳಿಯಲ್ಲಿ ಹರಡುವುದರಿಂದ ತೋಟದಲ್ಲಿ ಸಿಂಪಡಣೆ ಮಾಡುವಾಗ ಅಕ್ಕಪಕ್ಕದ ತೋಟದ ರೈತರೂ ಕೂಡ ಒಟ್ಟಾಗಿ ಸಿಂಪಡಣೆ ಮಾಡಿದರೆ ರೋಗ ಹರಡುವುದನ್ನು ಸಮರ್ಥವಾಗಿ ತಡೆಯಬಹುದು.
  • ಎಲೆಚುಕ್ಕಿ ರೋಗಕ್ಕೆ ಗೊಬ್ಬರ ಹಾಕುವಾಗ ವಿಶೇಷವಾಗಿ ಪೊಟ್ಯಾಷ್ ಮತ್ತು ಮ್ಯಾಗ್ನೇಷಿಯಂ ಸಲ್ಫೇಟ್ ಅನ್ನು ಒಂದೇ ಬಾರಿ ನೀಡದೇ, ಕನಿಷ್ಠ 15-20 ದಿನಗಳ ಅಂತರ ಕಾಯ್ದುಕೊಳ್ಳಬೇಕು.
  • ತೋಟದಲ್ಲಿ ಅತಿಯಾದ ನೆರಳಿದ್ದರೆ ಅಥವಾ ಅಂತರ ಬೆಳೆಗಳು ದಟ್ಟವಾಗಿದ್ದರೆ, ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ಸೂರ್ಯನ ಬೆಳಕು ಮತ್ತು ಗಾಳಿ ಮರಗಳ ನಡುವೆ ಆಡುವಂತೆ ಮಾಡಬೇಕು. ತೇವಾಂಶ ಹೆಚ್ಚಾದಷ್ಟೂ ರೋಗದ ತೀವ್ರತೆ ಹೆಚ್ಚುತ್ತದೆ.
  • ಮಣ್ಣಿನ ಹುಳಿ ಅಂಶವನ್ನು (Acidity) ಕಡಿಮೆ ಮಾಡಲು ಪ್ರತಿ ಮರಕ್ಕೆ 250-500 ಗ್ರಾಂ ನಷ್ಟು ಕೃಷಿ ಸುಣ್ಣ ಅಥವಾ ಡೋಲೋಮೈಟ್ ನೀಡಬೇಕು.
  • ಮ್ಯಾಗ್ನೇಷಿಯಂ ಸಲ್ಫೇಟ್, ಬೋರಾನ್ ಮತ್ತು ಸತುವಿನ (Zinc) ಕೊರತೆ ಉಂಟಾಗದಂತೆ ನೋಡಿಕೊಂಡರೆ ಎಲೆಗಳು ಹಸಿರಾಗಿರಲು ಮತ್ತು ಗಟ್ಟಿಯಾಗಿರಲು ಸಹಕಾರಿಯಾಗಲಿದೆ.
  • ಮಲೆನಾಡಿನ ಅತಿಯಾದ ಮಳೆಯಿಂದಾಗಿ ತೋಟದಲ್ಲಿ ನೀರು ನಿಲ್ಲಬಾರದು. ನೀರು ಸರಾಗವಾಗಿ ಹರಿದು ಹೋಗಲು ಬಸಿಗಾಲುವೆಗಳನ್ನು (Drainage channels) ಸರಿಯಾಗಿ ನಿರ್ವಹಿಸುವುದು.
  • ಶೇ.1ರಷ್ಟು ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳಿಗೆ ಮಾತ್ರವಲ್ಲದೆ, ಪೀಡಿತ ಸೋಗೆಗಳಿಗೂ (ಎಲೆಗಳಿಗೂ) ಸಿಂಪಡಿಸುವುದು.
  • ರೋಗ ತೀವ್ರವಾಗಿದ್ದರೆ ‘ಹೆಕ್ಸಾಕೋನಾಜೋಲ್’ ಅಥವಾ ‘ಪ್ರೊಪಿಕೋನಾಜೋಲ್’ ನಂತಹ ಶಿಲೀಂಧ್ರನಾಶಕಗಳನ್ನು (1 ಲೀಟರ್ ನೀರಿಗೆ 1 ಮಿ.ಲೀ) ಬೆರೆಸಿ ಸಿಂಪಡಿಸುವುದು.
  • ಯಾವುದೇ ಔಷಧ ಸಿಂಪಡಿಸುವಾಗ ಅದರ ಜೊತೆಗೆ ಕಡ್ಡಾಯವಾಗಿ ಅಂಟು ದ್ರಾವಣವನ್ನು ಸೇರಿಸುವುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular