ಬೆಂಗಳೂರು: ದೇಶದ ರಾಜಕಾರಣದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಲಿದೆ ಎಂದು ಕಾಯುತ್ತಿದ್ದ ಕೋಟ್ಯಂತರ ಭಾರತೀಯ ನಾರಿಯರಿಗೆ ಏಪ್ರಿಲ್ 17ರ ರಾತ್ರಿ ನಿರಾಸೆಯ ಕಹಿಯುಂಡಿದೆ. ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳ ಮೇಲೆ ಭಾಷಣ ಮಾಡುವ ನಾಯಕರ ಅಸಲಿ ಮುಖವಾಡ ಕಳಚಿಬಿದ್ದಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಹೆಜ್ಜೆಗೆ ಸಂಸತ್ತಿನಲ್ಲಿ ಮತ್ತೆ ವಿಘ್ನ ಎದುರಾಗಿದೆ.
ಏಪ್ರಿಲ್ 17ರ ತಡರಾತ್ರಿಯವರೆಗೆ ಲೋಕಸಭೆಯಲ್ಲಿ ಸಂವಿಧಾನದ 131ನೇ ತಿದ್ದುಪಡಿ ವಿಧೇಯಕ ಹಾಗೂ ಕ್ಷೇತ್ರ ಮರುವಿಂಗಡಣೆ ವಿಧೇಯಕ
2026ರ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸರ್ಕಾರದ ಪ್ರಸ್ತಾವನೆ ಸರಳವಾಗಿತ್ತು:
ಲೋಕಸಭೆ ಸೀಟುಗಳ ಸಂಖ್ಯೆಯನ್ನು 543 ರಿಂದ 815ಕ್ಕೆ ಹೆಚ್ಚಿಸುವುದು.
ಹಾಲಿ ಇರುವ ಸಂಸದರ ಸ್ಥಾನಕ್ಕೆ ಧಕ್ಕೆ ತರದೇ, ಹೆಚ್ಚುವರಿ ಸ್ಥಾನಗಳ ಮೂಲಕ ಮಹಿಳೆಯರಿಗೆ 1/3 ಭಾಗ ಮೀಸಲಾತಿ ನೀಡುವುದು.
ಇದನ್ನು 2029ರ ಚುನಾವಣೆಯಿಂದಲೇ ಜಾರಿಗೆ ತರುವುದು.
ದಶಕಗಳಿಂದ ಹಳೆಯ ಸಂಸದರ ಗತಿ ಏನು? ಎಂದು ಕೇಳುತ್ತಿದ್ದ ಪ್ರಶ್ನೆಗೆ ಸರ್ಕಾರ ಈ ಮೂಲಕ ಉತ್ತರಿಸಿತ್ತು. ಆದರೂ ವಿರೋಧ ಪಕ್ಷಗಳು ಪ್ರಾದೇಶಿಕ ಅಸಮತೋಲನದ ನೆಪವೊಡ್ಡಿ ಮಸೂದೆಗೆ ತಡೆ ಒಡ್ಡಿದವು.
ಪಂಚಾಯಿತಿಯಲ್ಲಿ ಓಕೆ, ಪಾರ್ಲಿಮೆಂಟ್‌ನಲ್ಲಿ ಯಾಕೆ ಬೇಡ?
ಇಂದು ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಂಚಾಯತ್ ಮಟ್ಟದಲ್ಲಿ ಮಹಿಳೆಯರೇ ಆಡಳಿತ ನಡೆಸುತ್ತಿದ್ದಾರೆ. ಸುಮಾರು 275 ಜಿಲ್ಲಾ ಪಂಚಾಯತ್‌ಗಳ ಚುಕ್ಕಾಣಿ ಮಹಿಳೆಯರ ಕೈಯಲ್ಲಿದೆ. ಅವರು ಸಾವಿರಾರು ಕೋಟಿ ಬಜೆಟ್ ನಿಭಾಯಿಸುತ್ತಾ ಯಶಸ್ವಿ ಎನಿಸಿಕೊಂಡಿದ್ದಾರೆ. ತಳಮಟ್ಟದಲ್ಲಿ ಮಹಿಳೆಯರ ನಾಯಕತ್ವವನ್ನು ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳು, ಶಾಸಕಾಂಗ ಮತ್ತು ಸಂಸತ್ತಿನಂತಹ ಹೈ-ಪ್ರೊಫೈಲ್ ಜಾಗಗಳಲ್ಲಿ ಅಧಿಕಾರ ಬಿಟ್ಟುಕೊಡಲು ಮಾತ್ರ ಹಿಂದೇಟು ಹಾಕುತ್ತಿವೆ.
ಸಾಮಾಜಿಕ ಬದಲಾವಣೆ ವರ್ಸಸ್ ರಾಜಕೀಯ ಇಚ್ಛಾಶಕ್ತಿ
ಕಳೆದ 10-12 ವರ್ಷಗಳಲ್ಲಿ ಉಜ್ವಲ ಗ್ಯಾಸ್, ಸ್ವಚ್ಛ ಭಾರತ್ ಶೌಚಾಲಯಗಳು ಮತ್ತು ಜನಧನ್ ಖಾತೆಗಳ ಮೂಲಕ ಮಹಿಳೆಯರ ಬದುಕು ಘನತೆಯಿಂದ ಕೂಡಿರುವಂತೆ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಈ ಸಾಮಾಜಿಕ ಸಬಲೀಕರಣವು ‘ರಾಜಕೀಯ ಸಬಲೀಕರಣ’ವಾಗಿ ಬದಲಾಗುವ ಹಂತದಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಶುರುವಾಗಿವೆ.
ಮಹಿಳೆಯರು ನೆನಪಿಟ್ಟುಕೊಳ್ಳುತ್ತಾರೆ
ಇದು ಕೇವಲ ಒಂದು ಮಸೂದೆಯ ಸೋಲಲ್ಲ, ಬದಲಾಗಿ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ. ನಿಮ್ಮ ಅಜ್ಜಿ ಕಾಯುತ್ತಿದ್ದರು, ನಿಮ್ಮ ತಾಯಿ ಕನಸು ಕಂಡಿದ್ದರು, ಈಗ ನಿಮ್ಮ ಮಗಳು ಕಾಯುತ್ತಿದ್ದಾಳೆ. ಆದರೆ ಇಂದಿನ ಮಹಿಳೆ ಅನುಮತಿಗಾಗಿ ಕಾಯುವವಳಲ್ಲ. ಅಧಿಕಾರ ಹಂಚಿಕೊಳ್ಳಲು ಯಾರು ಸಿದ್ಧರಿದ್ದಾರೆ ಮತ್ತು ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ಈಗ ದೇಶದ ಮಹಿಳೆಯರಿಗೆ ಸ್ಪಷ್ಟವಾಗಿ ತಿಳಿದಿದೆ.

