HomeKarnatakaಸಿಎಂ v/s ಡಿಕೆಶಿ: ಅಪೆಕ್ಸ್ ಬ್ಯಾಂಕ್ ಚುನಾವಣೆ, ಸಿದ್ದರಾಮಯ್ಯ ಚಹಾಕೂಟ!

ಸಿಎಂ v/s ಡಿಕೆಶಿ: ಅಪೆಕ್ಸ್ ಬ್ಯಾಂಕ್ ಚುನಾವಣೆ, ಸಿದ್ದರಾಮಯ್ಯ ಚಹಾಕೂಟ!

ಕರ್ನಾಟಕದ ರಾಜಕೀಯದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜನೆ ಮಾಡಿದ್ದ ಚಹಾಕೂಟ ಸಹ ಕುತೂಹಲ ಕೆರಳಿಸಿದೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಈ ಚಹಾಕೂಟ ನಡೆದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ v/s ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ರಾಜಕೀಯ ಸದ್ದು ಮಾಡುತ್ತಿದೆ.

ಜನವರಿ 26ರ ಸೋಮವಾರ ಸಿದ್ದರಾಮಯ್ಯ ಚಹಾಕೂಟ ಆಯೋಜನೆ ಮಾಡಿದ್ದರು. ಈ ಕುರಿತು ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಕೆ.ಎನ್.ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕೆ.ಎನ್.ರಾಜಣ್ಣ ಸಿದ್ದರಾಮಯ್ಯ ಬಣದಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕೆ.ಎನ್.ರಾಜಣ್ಣ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣದಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರುಗಳಿಗೆ ಏರ್ಪಡಿಸಿದ್ದ ಚಹಾಕೂಟದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಶುಭಾಶಯ ಕೋರಿದರು ಎಂದು ಚಹಾಕೂಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಕೆ.ಶಿವಕುಮಾರ್ ಬಣದಿಂದ ಯಾರು?: ಅಪೆಕ್ಸ್ ಬ್ಯಾಂಕ್ ಚುನಾವಣೆ ಜನವರಿ 29ಕ್ಕೆ ನಿಗದಿಯಾಗಿದೆ. ಚುನಾವಣೆಯಲ್ಲಿ ಹೆಚ್ಚಿನ ನಿರ್ದೇಶಕರ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಆದ್ದರಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದ ಪೈಪೋಟಿ ನಡೆಯುತ್ತಿದೆ.

ಡಿ.ಕೆ.ಶಿವಕುಮಾರ್ ಬಣದಿಂದ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಚಹಾಕೂಟದಲ್ಲಿ ಎಲ್ಲಾ ನಿರ್ದೇಶಕರ ಜೊತೆ ಮಾತುಕತೆ ನಡೆಸಿ, ಪಕ್ಷದ ಹೈಕಮಾಂಡ್ ಸೂಚಿಸುವ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಜನವರಿ 29ರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಬೇಕಿದೆ. 12.30ಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 21 ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. 18 ಡಿಸಿಸಿ ಬ್ಯಾಂಕುಗಳು ಈಗಾಗಲೇ ನಾಮ ನಿರ್ದೇಶಿತರನ್ನು ನಿಯೋಜನೆ ಮಾಡಿವೆ.

18 ನಿರ್ದೇಶಕರಲ್ಲಿ 15 ನಿರ್ದೇಶಕರು ಕಾಂಗ್ರೆಸ್‌ನವರು. ಹಾಸನದಿಂದ ಆರ್. ಸೂರಜ್ (ಜೆಡಿಎಸ್), ಕೊಡಗು-ಕೊಡಂದೇರ ಪಿ.ಗಣಪತಿ (ಬಿಜೆಪಿ), ಚಿಕ್ಕಮಗಳೂರು ಬೆಳ್ಳಿ ಪ್ರಕಾಶ್ (ಬಿಜೆಪಿ) ಬೆಂಬಲಿತರು.

15 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಾದ ಕಾರಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಸಿಗುವುದು ಪಕ್ಕಾ ಆಗಿದೆ. ಆದ್ದರಿಂದಲೇ ಬಣ ರಾಜಕೀಯ ಜೋರಾಗಿದೆ. ಕೆ.ಎನ್.ರಾಜಣ್ಣ ಪ್ರಬಲ ಆಕಾಂಕ್ಷಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಪ್ತರಾಗಿರುವ ಕಾರಣ ಅವರೇ ಆಯ್ಕೆಯಾಗಲಿದ್ದಾರೆ ಎಂಬ ಲೆಕ್ಕಾಚಾರವಿದೆ.

ಈಗಾಗಲೇ ಕೆ.ಎನ್.ರಾಜಣ್ಣ 2001-2005, 2025-2020ರ ಅವಧಿಗೆ ಎರಡು ಬಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈಗ 3ನೇ ಅವಧಿಗೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ ಕೆ.ಎನ್.ರಾಜಣ್ಣ ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಆದ್ದರಿಂದ ಈ ಬಾರಿ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಡಿ.ಕೆ.ಶಿವಕುಮಾರ್ ಆಪ್ತರಾದ ಎಸ್.ರವಿ ಪ್ರಬಲ ಆಕಾಂಕ್ಷಿ.

ಎಸ್.ರವಿ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಯಾರಿಗೆ ಅಧ್ಯಕ್ಷರಾಗಲು ಅವಕಾಶ ನೀಡಲಿದೆ? ಎಂಬುದು ಈಗ ರಾಜ್ಯ ರಾಜಕೀಯದ ಚರ್ಚೆಯ ವಿಚಾರವಾಗಿದೆ.

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಲ್ಲಿ ಸಚಿವ ಶಿವಾನಂದ ಪಾಟೀಲ್, ಡಿ.ಸುಧಾಕರ್, ಶಾಸಕ ನರೇಂದ್ರ ಸ್ವಾಮಿ, ಸಚಿವ ಸತೀಶ್ ಜಾರಕಿಹೊಳಿ ಪುತ್ರ  ರಾಹುಲ್ ಜಾರಕಿಹೊಳಿ, ಸಚಿವ ಈಶ್ವರ ಖಂಡ್ರೆ ಸಹೋದರ ಅಮರ್ ಕುಮಾರ್ ಖಂಡ್ರೆ, ಆರ್.ಎಂ.ಮಂಜುನಾಥ ಗೌಡ ಮುಂತಾವರಿದ್ದಾರೆ. ಯಾರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ? ಎಂಬುದು ಸದ್ಯದ ಕುತೂಹಲವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular