ಬೆಂಗಳೂರು: ಕೋಡಿಂಗ್ ಇತ್ಯಾದಿ ಕೆಲಸಗಳನ್ನು ಸುಲಭವಾಗಿ ಮಾಡುವ ಎಐ ಮಾದರಿಯ ಆಂಥ್ರೋಪಿಕ್ ಸಂಸ್ಥೆ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಹೊಸ ಕಚೇರಿಯನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಆಂಥ್ರೋಪಿಕ್ ಕಚೇರಿ ಆರಂಭವಾಗಿದ್ದು, ಇದು ಭಾರತದಲ್ಲಿ ಆಂಥ್ರೋಪಿಕ್ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಇದು ಎರಡನೇ ಕಚೇರಿಯಾಗಿದೆ. ಭಾರತದ ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ.
ಆಂಥ್ರೋಪಿಕ್ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ ಕ್ಲಾಡ್ ಎಐ ಸರ್ವಿಸ್ಗೆ ಭಾರತವೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಹೇಳಲಾಗುತ್ತಿದೆ.
ಆ್ಯಪ್ಗಳನ್ನು ತಯಾರಿಸುವುದು, ಸಿಸ್ಟಂಗಳ ಆಧುನೀಕರಣ, ಪ್ರೊಡಕ್ಷನ್ ಸಾಫ್ಟ್ವೇರ್ ಸಾಗಣೆ ಇತ್ಯಾದಿಗೆ ಕ್ಲಾಡ್ ಎಐ ಬಳಕೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ, ಭಾರತದ ಮಾರುಕಟ್ಟೆಯ ಮೇಲೆ ಆಂಥ್ರೋಪಿಕ್ ಹೆಚ್ಚಿನ ಆದ್ಯತೆ ನೀಡಲಿದೆ.
ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದ ಬಗ್ಗೆ ಮಾತನಾಡಿರುವ ಆಂಥ್ರೋಪಿಕ್ನ ಭಾರತ ವಿಭಾಗದ ಎಂಡಿ ಇರಿನಾ ಘೋಸ್, ಬೆಂಗಳೂರು ಕಚೇರಿಯನ್ನು ಇಂದು ಅಧಿಕೃತವಾಗಿ ಆರಂಭಿಸಿದ್ದೇವೆ. ಉದ್ದಿಮೆ, ಶಿಕ್ಷಣ ಮತ್ತು ಕೃಷಿ ಸೆಕ್ಟರ್ಗಳಲ್ಲಿ ಜೊತೆಗಾರಿಕೆಗಳನ್ನು ಹೊಂದಿದ್ದೇವೆ. ಭಾರತದ ಎಲ್ಲಾ ಸೆಕ್ಟರ್ಗಳಲ್ಲೂ ಎಐ ಸೇವೆ ಮಾಡಲು ಬದ್ಧರಾಗಿದ್ದೇವೆ. ಹೆಚ್ಚು ಜನರು ಮತ್ತು ಉದ್ದಿಮೆಗಳಿಗೆ ಎಐ ಲಾಭಗಳನ್ನು ಕೊಡಲು ಭಾರತ ಒಳ್ಳೆಯ ಅವಕಾಶ ಕೊಡುತ್ತದೆ. ಭಾರತದಲ್ಲಿ ಅಸಾಧಾರಣ ತಾಂತ್ರಿಕ ಪ್ರತಿಭೆ, ಅಗಾಧ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಇದೆ. ತಂತ್ರಜ್ಞಾನ ಮೂಲಕ ಜನರ ಜೀವನ ಸುಧಾರಿಸುವ ಕಾರ್ಯದಲ್ಲಿ ಯಶಸ್ಸು ಹೊಂದಿದೆ. ಈ ಎಐ ತಂತ್ರಜ್ಞಾನವು ಜನರಿಗೆ ಅನುಕೂಲವಾಗುವಂತಾಗಲು ಇಂತಹ ವಾತಾವರಣವೇ ಬೇಕಿರುವುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕನ್ನಡ, ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಎಐ ಮಾಡಲ್ ಅಭಿವೃದ್ಧಿಪಡಿಸುವ ಕಡೆಗೂ ಆಂಥ್ರೋಪಿಕ್ ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸಿದೆ. ಈಗಿರುವ ಎಐ ಮಾಡಲ್ಗಳು ಇಂಗ್ಲೀಷ್ನಲ್ಲಿ ಉತ್ತಮ ಸೇವೆ ಒದಗಿಸುತ್ತವೆ. ಆದರೆ, ಹಿಂದಿ, ಬಂಗಾಳ, ಮರಾಠಿ, ಕನ್ನಡ, ತೆಲುಗು, ತಮಿಳುನ, ಪಂಜಾಬಿ, ಗುಜರಾತಿ, ಮಲಯಾಳಂ, ಉರ್ದು ಭಾಷೆಗಳಲ್ಲಿ ಸಾಕಷ್ಟು ಟ್ರೈನಿಂಗ್ ಮಾಡಿ, ಈ ಅಂತರವನ್ನು ಕಡಿಮೆ ಮಾಡಲು ಆರು ತಿಂಗಳ ಹಿಂದೆಯೇ ಆಂಥ್ರೋಪಿಕ್ ಪ್ರಯತ್ನ ಆರಂಭಿಸಿತ್ತು. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

