ಚೆನ್ನೈ: ಜೂನ್ 21 ರಂದು ನಡೆಯಲಿರುವ ದೇಶದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ (NEET-UG 2026) ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭೂತಪೂರ್ವ ಮಿಲಿಟರಿ ಮಾದರಿ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಮುಖ ರಾಜಕೀಯ ನಾಯಕ ಕೆ. ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸ್ವಂತ ರಾಜಕೀಯ ಚಳವಳಿ ಆರಂಭಿಸಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಕೇಂದ್ರದ ಕಠಿಣ ನಿಯಮಗಳು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಬದಲು ಅವರ ಮೇಲಿನ ಮಾನಸಿಕ ಒತ್ತಡವನ್ನು ದುಪ್ಪಟ್ಟು ಮಾಡುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಪರೀಕ್ಷಾ ಕೇಂದ್ರವೋ ಅಥವಾ ಹೈ-ಲೆವೆಲ್ ಮಿಲಿಟರಿ ಕಾರ್ಯಾಚರಣೆಯೋ?ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅಣ್ಣಾಮಲೈ, ಕೇಂದ್ರದ ಭದ್ರತಾ ವ್ಯವಸ್ಥೆಯನ್ನು ತೀವ್ರ ಮಾರ್ಮಿಕವಾಗಿ ಟೀಕಿಸಿದ್ದಾರೆ.
“ಸಿಆರ್ಪಿಎಫ್ (CRPF) ಮತ್ತು ಸಿಐಎಸ್ಎಫ್ (CISF) ಭದ್ರತೆಯೊಂದಿಗೆ ಇಂಡಿಯನ್ ಏರ್ಫೋರ್ಸ್ (IAF) ಮೂಲಕ ಪ್ರಶ್ನೆ ಪತ್ರಿಕೆಗಳ ಏರ್ಲಿಫ್ಟ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ 4 ಪದರಗಳ ಸಿಸಿಟಿವಿ ಕಣ್ಗಾವಲು, ಬಯೋಮೆಟ್ರಿಕ್ ಮತ್ತು ಫೇಶಿಯಲ್ ರೆಕಗ್ನಿಷನ್, ಹಂತ ಹಂತದ ತಪಾಸಣೆ ಹಾಗೂ ಪ್ರಧಾನಿ ಕಚೇರಿಯಿಂದಲೇ (PMO) ನೇರ ಮೇಲ್ವಿಚಾರಣೆ ಇದನ್ನು ಓದಿದರೆ ನಮಗೇನಾದರೂ ಹೈ-ಕ್ಲಾಸಿಫೈಡ್ ಮಿಲಿಟರಿ ಸಾಫ್ಟ್ವೇರ್ ಖರೀದಿಸುವ ಪ್ರಕ್ರಿಯೆ ಅನಿಸಬಹುದು. ಆದರೆ ಇದು ಜೂನ್ 21 ರ ನೀಟ್ ಮರುಪರೀಕ್ಷೆಗೆ ಶಿಕ್ಷಣ ಸಚಿವಾಲಯ ಮಾಡಿಕೊಂಡಿರುವ ಸಿದ್ಧತೆ” ಎಂದು ವ್ಯಂಗ್ಯವಾಡಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ
ಪೇಪರ್ ಲೀಕ್ ತಡೆಯಲು ಸರ್ಕಾರ ಹೆಚ್ಚುವರಿ ಭದ್ರತೆ ನಿಯೋಜಿಸುವುದನ್ನು ವಿದ್ಯಾರ್ಥಿಗಳು ಸ್ವಾಗತಿಸುತ್ತಾರೆ. ಆದರೆ, ಪರೀಕ್ಷಾ ಕೇಂದ್ರದ ಒಳಗೆ ಹೋಗುವ ಮುನ್ನ ನಡೆಸುವ ಗಂಟೆಗಟ್ಟಲೆಯ ತಪಾಸಣೆ, ತೀವ್ರ ನಿಗಾ ಹಾಗೂ ಪರೀಕ್ಷಾ ಸಮಯವನ್ನು 180 ನಿಮಿಷಗಳಿಂದ 195 ನಿಮಿಷಗಳಿಗೆ ಹೆಚ್ಚಿಸಿರುವುದು ತಿಂಗಳುಗಟ್ಟಲೆ ಓದಿರುವ ಯುವ ವಿದ್ಯಾರ್ಥಿಗಳ ಮೇಲೆ ಭಾರಿ ಮಾನಸಿಕ ಹೊರೆ ತರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಸರ್ಕಾರ ಪೇಪರ್ ಲೀಕ್ ತಡೆಯುವ ಭರದಲ್ಲಿ ಪರೀಕ್ಷೆ ಎದುರಿಸಲಿರುವ ಸಣ್ಣ ವಯಸ್ಸಿನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಮರೆತಿದೆ. ಇದು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 (NEEP) ರ ಪರೀಕ್ಷಾ ಒತ್ತಡ ಮುಕ್ತ ವಾತಾವರಣದ ಮೂಲ ಉದ್ದೇಶವನ್ನೇ ಗಾಳಿಗೆ ತೂರಿದಂತಿದೆ” ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.
ಅಡ್ಮಿಟ್ ಕಾರ್ಡ್ ತಾಂತ್ರಿಕ ದೋಷ ಹಾಗೂ ಟೆಲಿಗ್ರಾಂ ನಿಷೇಧ
ಇಷ್ಟೆಲ್ಲಾ ಹೈಟೆಕ್ ಭದ್ರತಾ ವ್ಯವಸ್ಥೆ ಮಾಡಿಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ವಿದ್ಯಾರ್ಥಿಗಳಿಗೆ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಎದುರಾಗಿರುವ ತಾಂತ್ರಿಕ ದೋಷವನ್ನು ಇನ್ನೂ ಬಗೆಹರಿಸಿಲ್ಲ ಎಂದು ಅಣ್ಣಾಮಲೈ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಟಿಎ, ಸರ್ವರ್ ಸಮಸ್ಯೆಯಿಂದಾಗಿ ತಾಂತ್ರಿಕ ದೋಷ ಉಂಟಾಗಿದ್ದು, ಶೀಘ್ರದಲ್ಲೇ ಅದನ್ನು ಬಗೆಹರಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದೆ.
ಮತ್ತೊಂದೆಡೆ, ಪರೀಕ್ಷೆಯಲ್ಲಿ ನಕಲು ಹಾಗೂ ವಂಚನೆ ಜಾಲಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದಲ್ಲಿ ತಾತ್ಕಾಲಿಕವಾಗಿ ಟೆಲಿಗ್ರಾಂ (Telegram) ಮೆಸೇಜಿಂಗ್ ಆ್ಯಪ್ ಬಳಕೆಯನ್ನು ನಿರ್ಬಂಧಿಸಿದೆ. ಒಟ್ಟಿನಲ್ಲಿ, ಜೂನ್ 21 ರ ನೀಟ್ ಮರುಪರೀಕ್ಷೆಯು ದೇಶಾದ್ಯಂತ ಭಾರಿ ರಾಜಕೀಯ ಮತ್ತು ಸಾಮಾಜಿಕ ಸಂಚಲನಕ್ಕೆ ಕಾರಣವಾಗಿದೆ.

