ಗಾಂಧಿನಗರ: ಗುಜರಾತ್ ನ ಕೆವಾಡಿಯಾದ ಏಕತಾ ನಗರದಲ್ಲಿ ಇಂದು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಸ್ಯಾಂಡಲ್ವುಡ್ ಹಿರಿಯ ನಟ ಅನಂತ್ ನಾಗ್ ಅವರಿಗೆ ಚಿತ್ರರಂಗದ ಮೇರು ಗೌರವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಉಳಿದಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಕನ್ನಡದ 4, ತುಳು ಭಾಷೆಯ ಒಂದು ಸಿನಿಮಾ ಗೆ ಇದೇ ವೇಳೆ ಗೌರವಿಸಲಾಗುವುದು.
ಚಿತ್ರರಂಗದಲ್ಲಿ ಸುದೀರ್ಘ 5 ದಶಕ ಸಲ್ಲಿಸಿದ ಸೇವೆಗಾಗಿ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಮಂಗಳವಾರ ಗುಜರಾತ್ ನ ಕೆವಾಡಿಯಾದ ಏಕತಾ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕನ್ನಡದ ಮಿಥ್ಯ ಸಿನಿಮಾ ಅತ್ಯುತ್ತಮ ಚಲನಚಿತ್ರ ಎಂದು ಘೋಷಣೆಯಾಗಿದ್ದು, ಇದರಲ್ಲಿ ಅಭಿನಯಿಸಿದ ಆತೀಶ್ ಶೆಟ್ಟಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಗೆದ್ದಿದ್ದಾರೆ. ಚಿತ್ರದ ಪೋಷಕ ನಟಿ ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಳಿಸಿದ್ದಾರೆ. ಕೆಂಚನೂರು ಪ್ರದೀಪ ಅವರ ಪುಸ್ತಕಕ್ಕೆ ಅತ್ಯುತ್ತಮ ಸಿನಿಮಾ ಪುಸ್ತಕ ವಿಭಾಗದ ಪ್ರಶಸ್ತಿ ಲಭಿಸಿದೆ. ಕರಾವಳಿಯ ದೈವಾರಾಧನೆ ಕಥೆ ಹೊಂದಿರುವ ಶಿವಧ್ವಜ್ ಅವರ ಇಂಬು ಸಿನಿಮಾ ಪ್ರಶಸ್ತಿ ಗೆದ್ದಿದೆ. ಈ ಚಿತ್ರಗಳಿಗೆ ಕೂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು.
‘ಸ್ಪಾರ್ಕ್’ ಸಿನಿಮಾದ ಮೊದಲ ಪ್ರದರ್ಶನ
ಶಿವಮೊಗ್ಗ: ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ ‘ಸ್ಪಾರ್ಕ್’ ಸಿನಿಮಾದ ಮೊದಲ ಪ್ರದರ್ಶನಕ್ಕೆ ಶಿವಮೊಗ್ಗ ಸಾಕ್ಷಿಯಾಗಲಿದೆ. ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಚಿತ್ರವು, ಅದಕ್ಕೂ ಮೂರು ದಿನ ಮುನ್ನ ಅಂದರೆ ಸೆಪ್ಟೆಂಬರ್ 22 ರಂದು ಮಂಗಳವಾರ ಸಂಜೆ 7 ಗಂಟೆಗೆ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ವಿಶೇಷ ಪ್ರದರ್ಶನಗೊಳ್ಳಲಿದೆ.
ಶಿವಮೊಗ್ಗದ ಗುಡ್ಡೆಕಲ್ ದೇವಸ್ಥಾನದಲ್ಲಿ ಹುಟ್ಟಿ ಬೆಳೆದ ವಿಶ್ವಾಸ್ ಮುರಳೀಧರ ನಾಯರ್ ಅವರು ‘ಸ್ಪಾರ್ಕ್’ ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದು, ಅವರ ಒತ್ತಾಯದ ಮೇರೆಗೆ ಸಿನಿಮಾದ ಮೊಟ್ಟಮೊದಲ ಪ್ರದರ್ಶನವನ್ನು ಹುಟ್ಟೂರಾದ ಶಿವಮೊಗ್ಗದಲ್ಲೇ ಆಯೋಜಿಸಲಾಗಿದೆ. ವಿಶೇಷ ಪ್ರದರ್ಶನದಲ್ಲಿ ಚಿತ್ರತಂಡದ ಸಂಪೂರ್ಣ ಬಳಗ ಪಾಲ್ಗೊಳ್ಳಲಿದೆ.
ನಿರಂಜನ್ ಸುಧೀಂದ್ರ ಅವರ ವೃತ್ತಿಜೀವನದ ವಿಭಿನ್ನ ಚಿತ್ರವೆಂದೇ ಹೇಳಲಾಗುತ್ತಿರುವ ‘ಸ್ಪಾರ್ಕ್’, ಕೇವಲ ಪ್ರೇಮಕಥೆಗೆ ಸೀಮಿತವಾಗದೆ ವಿಭಿನ್ನ ಕಥಾಹಂದರ ಹೊಂದಿದೆ. ಸಿನಿಮಾದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಸಚಿನ್ ಬಸ್ರೂರು ಸಂಗೀತ ನಿರ್ದೇಶನದಲ್ಲಿ ವೇಗದ ಹಾಡುಗಳ ಜತೆಗೆ ಮಾಧುರ್ಯಮಯ ಗೀತೆಗಳೂ ಮೂಡಿಬಂದಿವೆ. ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ನಿರಂಜನ್ ಅವರ ಸಮರ್ಪಣಾಭಾವ ಗಮನ ಸೆಳೆಯುತ್ತದೆ.
ಚಿತ್ರದ ಪ್ರತಿಯೊಂದು ಪಾತ್ರದಲ್ಲೂ ಒಂದೊAದು ‘ಕಿಡಿ’ ಅಡಗಿದ್ದು, ಅದು ಯಾವಾಗ ಮತ್ತು ಏಕೆ ಸಿಡಿಯುತ್ತದೆ ಎಂಬುದೇ ಚಿತ್ರದ ಪ್ರಮುಖ ಕುತೂಹಲವಾಗಿದೆ. ಜಾಕಿ ಭಾವನಾ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಚನಾ ಇಂದರ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ.
‘ಸ್ಪಾರ್ಕ್’ ಚಿತ್ರದ ಮತ್ತೊಂದು ವಿಶೇಷವೆಂದರೆ ಲವ್ಲಿಸ್ಟಾರ್ ಪ್ರೇಮ್ ಮೊದಲ ಬಾರಿಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಅವರು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ, ವಿಜಯ್ ಚೆಂಡೂರ್, ನೀನಾಸಂ ಅಶ್ವಥ್ ಸೇರಿದಂತೆ ಹಲವು ಪೋಷಕ ನಟರು ಚಿತ್ರದಲ್ಲಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾAತೇಶ್ ಹಂದ್ರಾಳ್ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ನಿರ್ಮಾಪಕಿ ಗರೀಮಾ ಅವಿನಾಶ್ ವಸಿಷ್ಠ ಚಿತ್ರಕ್ಕೆ ಅಗತ್ಯವಾದ ಬಂಡವಾಳ ಹೂಡಿದ್ದಾರೆ. ಚಿತ್ರದ ಟ್ರೇಲರ್‌ಗೆ ನಟ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಪ್ರೀಮಿಯರ್ ಪ್ರದರ್ಶನಗಳು ಬೆಂಗಳೂರಿಗೆ ಸೀಮಿತವಾಗಿರುವ ಸಂದರ್ಭದಲ್ಲಿ ‘ಸ್ಪಾರ್ಕ್’ ಸಿನಿಮಾದ ಮೊದಲ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಶಿವಮೊಗ್ಗ ಸಿನಿಮಾಸ್ ಅಡ್ಡದ ರಘು ಗುಂಡ್ಲು ನಿರ್ವಹಿಸುತ್ತಿದ್ದಾರೆ.

