ಕೇಂದ್ರ ಸರ್ಕಾರ ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಬಂಪರ್ ಕೊಡುಗೆ ನೀಡಿದೆ. ಈಗಾಗಲೇ 2 ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಪರ್ಕ ಇರುವ ಮಂಗಳೂರು ನಗರಕ್ಕೆ ಅಮೃತ್ ಭಾರತ್ ರೈಲು ಘೋಷಣೆ ಮಾಡಲಾಗಿದೆ.
ತಮಿಳುನಾಡು ರಾಜ್ಯದ ನಾಗರಕೋಯಿಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಅಮೃತ್ ಭಾರತ್ ರೈಲು ಸಂಚಾರವನ್ನು ನಡೆಸಲಿದೆ. ವಾರದಲ್ಲಿ ಒಂದು ದಿನ ಈ ರೈಲು ಸಂಚಾರ ನಡೆಸಲಿದೆ ಎಂದು ಆದೇಶ ತಿಳಿಸಿದೆ.
ರೈಲು ವೇಳಾಪಟ್ಟಿ: ನಾಗರಕೋಯಿಲ್-ಮಂಗಳೂರು ಜಂಕ್ಷನ್ ನಡುವೆ ರೈಲು ನಂಬರ್ 16329/ 16330 ಸಂಚಾರವನ್ನು ನಡೆಸಲಿವೆ. ನಾಗರಕೋಯಿಲ್ ಡಿಪೋದಲ್ಲಿ ಈ ರೈಲನ್ನು ನಿರ್ವಹಣೆ ಮಾಡಲಾಗುತ್ತದೆ.
ಈ ರೈಲು ಸೇವೆ ಯಾವಾಗ ಆರಂಭ ಎಂದು ದಿನಾಂಕವನ್ನು ಪ್ರಕಟಿಸಿಲ್ಲ. ರೈಲಿನ ಉಳಿದ ವಿವರಗಳನ್ನು ಆದೇಶದಲ್ಲಿ ತಿಳಿಸಲಾಗಿದೆ. ಈ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಳೆದ ವಾರ 3 ಅಮೃತ್ ಭಾರತ್ ರೈಲುಗಳನ್ನು ರಾಜ್ಯಕ್ಕೆ ನೀಡಲಾಗಿತ್ತು.
ರೈಲು ನಂಬರ್ 16329 ನಾಗರಕೋಯಿಲ್-ಮಂಗಳೂರು ಜಂಕ್ಷನ್ ರೈಲು ಮಂಗಳವಾರ 11.40ಕ್ಕೆ ಮಂಗಳೂರು ನಗರದಿಂದ ಹೊರಡಲಿದೆ. ಬುಧವಾರ 5 ಗಂಟೆಗೆ ಮಂಗಳೂರು ಜಂಕ್ಷನ್ಗೆ ಆಗಮಿಸಲಿದೆ. ರೈಲು ನಂಬರ್ 16330 ಮಂಗಳೂರು ಜಂಕ್ಷನ್- ನಾಗರಕೋಯಿಲ್ ರೈಲು ಬುಧವಾರ 22.05 ಮಂಗಳೂರು ಜಂಕ್ಷನ್ಗೆ ಬರಲಿದೆ. ಬುಧವಾರ 8 ಗಂಟೆಗೆ ಹೊರಡಲಿದೆ.
ಈ ರೈಲು ತಿರುವನಂತಪುರಂ ಸೆಂಟ್ರಲ್, ವರ್ಕಲ ಶಿವಗಿರಿ, ಕೊಲ್ಲಂ, ಕರುನಾಗಪಲ್ಲಿ, ಕಾಯಂಕುಲಂ, ಮಾವೇಲಿಕರ, ಚೆಂಗನ್ನೂರ್, ತಿರುವಲ್ಲ, ಚಂಗನಾಶ್ಶೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಆಲುವ, ತ್ರಿಶೂರ್, ಶೊರ್ನೂರ್, ತಿರೂರ್, ಕೋಯಿಕ್ಕೋಡ್, ಕೋಯಿಕ್ಕೋಡ್, ತಲಶ್ಶೇರಿ, ಕಣ್ಣೂರ್ ಮತ್ತು ಕಾಸರಗೋಡು ನಿಲುಗಡೆ ಹೊಂದಿದೆ.
ರೈಲಿನ ವಿಶೇಷತೆಗಳು: ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಅಮೃತ್ ಭಾರತ್ ಎಕ್ಸ್ಪ್ರೆಸ್ ಸಹ ಒಂದು. ಆಧುನಿಕ ಸೌಲಭ್ಯ ಹೊಂದಿರುವ ನಾನ್ ಎಸಿ ರೈಲುಗಳು ಇದಾಗಿದ್ದು, ಸುದೀರ್ಘ ಪ್ರಯಾಣಕ್ಕೆ ಸ್ಲೀಪರ್ ಕ್ಲಾಸ್ ಸೇವೆಯನ್ನು ಹೊಂದಿದೆ.
ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣದ ಅನುಭವ ನೀಡುವ ಗುರಿಯೊಂದಿದೆ ಅಮೃತ್ ಭಾರತ್ ರೈಲು ಪರಿಚಯಿಸಲಾಗಿದೆ. ಹಬ್ಬದ ಸಮಯದಲ್ಲಿ ಕಂಡುಬರುವ ಪ್ರಯಾಣಿಕರ ಅತಿಯಾದ ಒತ್ತಡವನ್ನು ನಿಭಾಯಿಸಲು ಈ ಮಾದರಿ ರೈಲನ್ನು ವಿನ್ಯಾಸಗೊಳಿಸಲಾಗಿದೆ.
1,000 ಕಿಲೋಮೀಟರ್ಗೆ ಅಂದಾಜು ರೂ. 500 ದರವನ್ನು ಹೊಂದಿರುವ ಈ ಸೇವೆಯು, ಕಡಿಮೆ ಮತ್ತು ಮಧ್ಯಮ ದೂರದ ಪ್ರಯಾಣಕ್ಕೂ ಕಡಿಮೆ ದರವನ್ನು ಹೊಂದಿದೆ. ಅಲ್ಲದೆ, ಈ ಸೇವೆಯು ಯಾವುದೇ ಬದಲಾಗುವ ದರಗಳಿಲ್ಲದ ಸರಳ ಮತ್ತು ಪಾರದರ್ಶಕ ದರ ರಚನೆಯನ್ನು ಹೊಂದಿರುತ್ತದೆ.
ಅಮೃತ್ ಭಾರತ್ ಎಕ್ಸ್ಪ್ರೆಸ್ ಉದ್ಯೋಗ, ಶಿಕ್ಷಣ ಮತ್ತು ಕೌಟುಂಬಿಕ ಅಗತ್ಯಗಳಿಗಾಗಿ ಕೈಗೊಳ್ಳುವ ಪ್ರಯಾಣಕ್ಕೆ ಬೆಂಬಲ ನೀಡುತ್ತದೆ. ಇದು ದೇಶಾದ್ಯಂತ ಕೈಗೆಟುಕುವ ದರದ ದೂರಸಂಪರ್ಕವನ್ನು ವಿಸ್ತರಿಸುವ ಭಾರತೀಯ ರೈಲ್ವೆ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ.
ಅಮೃತ್ ಭಾರತ್ ರೈಲು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ಇವುಗಳಲ್ಲಿ 11 ಸಾಮಾನ್ಯ ದರ್ಜೆಯ ಬೋಗಿಗಳು, 8 ಸ್ಲೀಪರ್ ಕ್ಲಾಸ್ ಬೋಗಿಗಳು, 1 ಪ್ಯಾಂಟ್ರಿ ಕಾರ್, ಮತ್ತು ವಿಕಲಚೇತನ ಸ್ನೇಹಿ ವಿಭಾಗಗಳನ್ನು ಹೊಂದಿರುವ 2 ಸೆಕೆಂಡ್ ಕ್ಲಾಸ್-ಕಮ್-ಲಗೇಜ್-ಕಮ್-ಗಾರ್ಡ್ ವ್ಯಾನ್ಗಳಿವೆ.
ಮಂಗಳೂರು ನಗರಕ್ಕೆ ಈಗಾಗಲೇ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿವೆ. ತಿರುವನಂತಪುರಂ-ಮಂಗಳೂರು, ಮಂಗಳೂರು-ಮಡಗಾಂವ್ ನಡುವೆ ಈ ರೈಲುಗಳು ಸಂಚಾರವನ್ನು ನಡೆಸುತ್ತದೆ. ಈಗ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸಂಪರ್ಕಿಸುವ ಅಮೃತ್ ಭಾರತ್ ರೈಲನ್ನು ಕೊಡುಗೆಯಾಗಿ ನೀಡಲಾಗಿದೆ.

