HomeInternationalಥಾಯ್ಲೆಂಡ್‌ನಲ್ಲಿ ಅಮೆರಿಕದ ಖ್ಯಾತ ಫಿಟ್ನೆಸ್ ತಾರೆ ಕಾನರ್ ಮರ್ಫಿ ಸಾವು: ಘಟನೆಗೂ ಮುನ್ನ ವಿಚಿತ್ರವಾಗಿ ವರ್ತಿಸಿದ್ದ...

ಥಾಯ್ಲೆಂಡ್‌ನಲ್ಲಿ ಅಮೆರಿಕದ ಖ್ಯಾತ ಫಿಟ್ನೆಸ್ ತಾರೆ ಕಾನರ್ ಮರ್ಫಿ ಸಾವು: ಘಟನೆಗೂ ಮುನ್ನ ವಿಚಿತ್ರವಾಗಿ ವರ್ತಿಸಿದ್ದ ಯೂಟ್ಯೂಬರ್

ಅಮೆರಿಕದ ಪ್ರಸಿದ್ಧ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಕಾನರ್ ಮರ್ಫಿ ಥಾಯ್ಲೆಂಡ್‌ನ ಸರೋವರವೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 32 ವರ್ಷದ ಕಾನರ್ ಮರ್ಫಿ ಅವರ ಮೃತದೇಹವು ಥಾಯ್ಲೆಂಡ್‌ನ ಸಮುತ್ ಪ್ರಕಾರ್ನ್ ಪ್ರಾಂತ್ಯದ ಐಷಾರಾಮಿ ವಸತಿ ಸಂಕೀರ್ಣದ ಬಳಿ ಇರುವ ಸರೋವರದಲ್ಲಿ ಪತ್ತೆಯಾಗಿದೆ. ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪೊಲೀಸರು ಪ್ರಾಥಮಿಕ ತನಿಖೆಯಿಂದ ಶಂಕಿಸಿದ್ದಾರೆ.

ವರದಿಗಳ ಪ್ರಕಾರ, ಘಟನೆ ನಡೆಯುವ ಮುನ್ನ ಕಾನರ್ ಮರ್ಫಿ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ತಾವು ವಾಸವಿದ್ದ ಬಾಡಿಗೆ ಮನೆಯ ಗೋಡೆಗಳಿಗೆ ಪೇಂಟ್ ಬಳಿದು ವಿರೂಪಗೊಳಿಸಿದ್ದ ಅವರು, ನಂತರ ಓಡುತ್ತಾ ಹೋಗಿ ಹತ್ತಿರದ ಸರೋವರಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ನಿವಾಸಿಯೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಮರ್ಫಿ ಅವರ ಅಸಹಜ ವರ್ತನೆ ದಾಖಲಾಗಿದ್ದು, ಸರೋವರಕ್ಕೆ ಇಳಿದ ನಂತರ ಅವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಮಾರು 10 ಮೀಟರ್ ಆಳವಿದ್ದ ಸರೋವರದ ದಂಡೆಯಿಂದ 20 ಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಗಿದೆ.

ಕಾನರ್ ಮರ್ಫಿ ಅವರ ಗೆಳತಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮರ್ಫಿ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು ಮತ್ತು ಅವರು ಆಗಾಗ ತೀವ್ರ ಕೋಪಗೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಅವರು ಯಾವುದೇ ಮಾದಕ ದ್ರವ್ಯ ಬಳಸುತ್ತಿರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಮರ್ಫಿ ಅವರ ಆಪ್ತ ಸ್ನೇಹಿತ ಹಾಗೂ ಸಹೋದ್ಯೋಗಿ ಟೋನಿ ಹ್ಯೂಜ್ ಈ ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ತೀವ್ರ ಕಂಬನಿ ಮಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೂಟ್ಯೂಬ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಕಾನರ್ ಮರ್ಫಿ, ತಮ್ಮ ವಿಶಿಷ್ಟ ಫಿಟ್ನೆಸ್ ವಿಡಿಯೋಗಳು ಮತ್ತು ಪ್ರಾಂಕ್ ವಿಡಿಯೋಗಳ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಆಧ್ಯಾತ್ಮಿಕತೆ ಮತ್ತು ಮನೋವಿಕಾರದ ವಿಚಾರಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದರು, ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಸದ್ಯ ಥಾಯ್ಲೆಂಡ್ ಪೊಲೀಸರು ಈ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular