ವಾಷಿಂಗ್ಟನ್-ಅಮೆರಿಕದ ವಲಸೆ ನೀತಿಗಳು ಮತ್ತಷ್ಟು ಕಠಿಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ ಅಮೆರಿಕದ ಕಾಲೇಜುಗಳಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಕುಸಿದಿದೆ.
ಪದವಿ ಪ್ರವೇಶಗಳಲ್ಲಿ ಕುಸಿತ
1,100ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ ಕಾಮನ್ ಆಪ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪ್ರವೇಶಕ್ಕಾಗಿ ಒಟ್ಟಾರೆ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಮಾರ್ಚ್ 1ರವರೆಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅರ್ಜಿಗಳ ಸಂಖ್ಯೆ ಶೇ.10ರಷ್ಟು ಇಳಿಕೆಯಾಗಿದೆ. ಇದು ದಾಖಲೆಯಲ್ಲೇ ಅತಿ ದೊಡ್ಡ ಕುಸಿತವಾಗಿದೆ.
ಅಮೆರಿಕದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅತಿ ದೊಡ್ಡ ಮೂಲವಾಗಿರುವ ಭಾರತದಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಶೇ.15ರಷ್ಟು ಇಳಿಕೆಯಾಗಿದೆ ಎಂದು ಲಾಭರಹಿತ ಸಂಸ್ಥೆಯ ವರದಿ ತಿಳಿಸಿದೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಕೋರ್ಸ್‌ಗಳಿಗೆ ಅಮೆರಿಕದಲ್ಲಿ 3.63 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಮೂಲಕ ಭಾರತವು ಅಮೆರಿಕಕ್ಕೆ ಅತಿ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಕಳುಹಿಸುವ ದೇಶವಾಗಿದೆ.
ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಆರ್ಥಿಕ ಕೊಡುಗೆ
2025-26ರ ಶರತ್ಕಾಲದ ಅವಧಿಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸ್ಥಳೀಯ ಆರ್ಥಿಕತೆಗೆ 41.77 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡಿದ್ದಾರೆ. 2026-27ರಲ್ಲಿ ಈ ಮೊತ್ತ 38.37 ಬಿಲಿಯನ್ ಡಾಲರ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಶಿಕ್ಷಣ ತಜ್ಞರ ಸಂಘಟನೆಯೊಂದು ಬಿಡುಗಡೆ ಮಾಡಿದ್ದ ವರದಿಯಲ್ಲೂ ಕಠಿಣ ವೀಸಾ ನಿಯಮಗಳು ಹಾಗೂ ನೀತಿಗಳಲ್ಲಿನ ಅನಿಶ್ಚಿತತೆಯಿಂದಾಗಿ 2026ರ ಶರತ್ಕಾಲದಲ್ಲಿ ಅಮೆರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿ 1.1 ಲಕ್ಷದವರೆಗೆ ಕಡಿಮೆಯಾಗಬಹುದು ಎಂದು ಅಂದಾಜಿಸಿತ್ತು.
ವೀಸಾ ಮತ್ತು ವಾಸ್ತವ್ಯದ ಅವಧಿ ನಿಯಮಗಳು
ಜುಲೈನಲ್ಲಿ ಅಮೆರಿಕ ಸರ್ಕಾರ ವಿದ್ಯಾರ್ಥಿ ಮತ್ತು ಪ್ರವಾಸಿ ವೀಸಾಗಳಿಗೆ ಅನ್ವಯಿಸುತ್ತಿದ್ದ ಸಾಂಪ್ರದಾಯಿಕ ಸ್ಟೇಟಸ್ ಅವಧಿ ನಿಯಮವನ್ನು ರದ್ದುಪಡಿಸುವ ಹೊಸ ನಿಯಮಗಳನ್ನು ಘೋಷಿಸಿತ್ತು. ಇದರಡಿ ವಾಸ್ತವ್ಯದ ಅವಧಿಯನ್ನು ನಾಲ್ಕು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಸಾಮಾನ್ಯವಾಗಿ ಇದು ಒಂದು ಶೈಕ್ಷಣಿಕ ಕೋರ್ಸ್ ಪೂರ್ಣಗೊಳಿಸಲು ಬೇಕಾಗುವ ಅವಧಿಯಾಗಿದೆ.
ಇದಲ್ಲದೆ, ಪದವಿ ಪೂರ್ಣಗೊಂಡ ಬಳಿಕ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಆಪನಲ್ ಪ್ರಾಕ್ಟಿಕಲ್ ಟ್ರೈನಿಂಗ್ ಕಾರ್ಯಕ್ರಮ ಬಳಸಲು ಬಯಸುವ ವಿದೇಶಿ ವಿದ್ಯಾರ್ಥಿಗಳ ಮೇಲೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಬಗ್ಗೆಯೂ ಅಮೆರಿಕ ಸರ್ಕಾರ ಚಿಂತನೆ ನಡೆಸುತ್ತಿದೆ.
ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕಕ್ಕೆ ತೆರಳುವ ವಿದೇಶಿ ಪ್ರಜೆಗಳಿಗೆ ಮೂಲಕ 12 ತಿಂಗಳು, ಕೆಲವು ಸಂದರ್ಭಗಳಲ್ಲಿ 24 ತಿಂಗಳವರೆಗೆ ಕೆಲಸ ಮಾಡಲು ಅವಕಾಶವಿದೆ. ಅಲ್ಲದೆ, ಉದ್ಯೋಗದಾತರ ಪ್ರಾಯೋಜಕತ್ವದ ಮೂಲಕ ಎಚ್‌ಬಿ-1 ವೀಸಾಕ್ಕೆ ಪರಿವರ್ತನೆಗೊಳ್ಳಲು ವಿದ್ಯಾರ್ಥಿಗಳಿಗೆ ಇದು ಅವಕಾಶ ನೀಡುತ್ತದೆ.
ಎಚ್‌ಬಿ-1 ವೀಸಾ ಹಾಗೂ ಉದ್ಯೋಗ ಅವಕಾಶಗಳು
ಎಚ್‌ಬಿ-1 ವೀಸಾ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುವ ವಲಸೆರಹಿತ ವೀಸಾವಾಗಿದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಈ ವೀಸಾವನ್ನು ಅವಲಂಬಿಸಿವೆ.

