ಚೆನ್ನೈ: ಬಹುಭಾಷಾ ನಟಿ ಅಂಬಿಕಾ ವಿರುದ್ಧ ಕೋಟಿ, ಕೋಟಿ ವಂಚನೆ ಆರೋಪ ಕೇಳಿಬಂದಿದೆ. ಖಾಅಲಿ ಚಕ್ ಗಳನ್ನು ಅನುಮತಿ ಇಲ್ಲದೇ ಬಳಸಿ ಬರೋಬ್ಬರಿ 46 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸ್ವತಃ ಅಂಬಿಕಾ ಅವರ ಸಹೋದರಿ ಖ್ಯಾತ ನಟಿ ರಾಧಾ ಅವರಿ ಆರೋಪಿಸಿದ್ದಾರೆ.
ತಮಿಳು ಚಿತ್ರರಂಗದ ಹಿರಿಯ ನಟಿ ರಾಧಾ, ತಮ್ಮ ಸಹೋದರಿ ನಟಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಚೆನ್ನೈ ನಿವಾಸದಲ್ಲಿ ಇದ್ದ ಸಹಿ ಮಾಡಿದ ಖಾಲಿ ಚೆಕ್ಗಳನ್ನ ತಮ್ಮ ಅನುಮತಿಯಿಲ್ಲದೇ ಪಡೆದು, ಅವುಗಳನ್ನು ಬಳಸಿ ಸುಮಾರು 46 ಕೋಟಿ ರೂ. ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ಸೆಪ್ಟೆಂಬರ್ 21ರಂದು ರಾಧಾ ದೂರು ಸಲ್ಲಿಸಿದ್ದಾರೆ. ನಟಿ ರಾಧಾ ಅವರು ತಾವು ನೀಡಿದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ರಾಧಾ ಅವರು ವ್ಯವಹಾರಕ್ಕೆ ಸಂಬಂಧಿಸಿದ ಖರ್ಚುಗಳಿಗಾಗಿ IDBI ಬ್ಯಾಂಕ್ನಲ್ಲಿ ಚಾಲ್ತಿ ಖಾತೆ ಹೊಂದಿದ್ದರು. ತಮ್ಮ ಚೆನ್ನೈ ನಿವಾಸದಲ್ಲಿರುವ ಕೊಠಡಿಯಲ್ಲಿ ಕೆಲವು ಸಹಿ ಮಾಡಿದ ಖಾಲಿ ಚೆಕ್ಗಳನ್ನ ಇಟ್ಟುಕೊಂಡಿದ್ದರು. ಸಂಬಳ, ವಿದ್ಯುತ್ ಸೇರಿದಂತೆ ವಿವಿಧ ಬಿಲ್ಗಳು, ತೆರಿಗೆ ಮತ್ತು ತೋಟದ ನಿರ್ವಹಣೆ ಮುಂತಾದ ಪಾವತಿಗಳಿಗೆ, ವಿಶೇಷವಾಗಿ ತಾವು ಪ್ರಯಾಣದಲ್ಲಿರುವ ಸಂದರ್ಭದಲ್ಲಿ ಈ ಚೆಕ್ಗಳನ್ನು ಬಳಸುತ್ತಿದ್ದರು.
ಆ ಖಾತೆಯನ್ನು ಆರಂಭದಲ್ಲಿ ARS Garden Studio ಹೆಸರಿನಲ್ಲಿ ನಿರ್ವಹಿಸಲಾಗುತ್ತಿತ್ತು. 2025ರ ಜನವರಿಯಲ್ಲಿ ವ್ಯವಹಾರದ ಹೆಸರನ್ನು RR Gardens ಎಂದು ಬದಲಾಯಿಸಿದ ಬಳಿಕ ಹೊಸ ಚೆಕ್ಬುಕ್ ಪಡೆದಿದ್ದಾಗಿ ರಾಧಾ ತಿಳಿಸಿದ್ದಾರೆ. ಹೀಗಾಗಿ ಹಿಂದಿನ ಚೆಕ್ಬುಕ್ ಬಳಸುವುದನ್ನ ನಿಲ್ಲಿಸಿದ್ದರೂ, ಹಳೆಯ ಚೆಕ್ಗಳು ಮನೆಯಲ್ಲೇ ಉಳಿದಿತ್ತು. ಮನೆಯಲ್ಲಿ ಹಳೆ ಚೆಕ್ ಇರುವುದನ್ನು ರಾಧಾ ಮರೆತುಬಿಟ್ಟಿದ್ದರಂತೆ
ಬ್ಯಾಂಕ್ ನಿಂದ ಈ ಬಗ್ಗೆ ಮಾಹಿತಿ ಬಂದಾಗಲೇ ಅವರಿಗೆ ನೆಮಪಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 17ರಂದು ಬ್ಯಾಂಕ್ನಿಂದ ಮಾಹಿತಿ ಬಂದಾಗ ಪ್ರಕರಣ ತಮ್ಮ ಪ್ರಕರಣ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಮ್ಮ ಹಳೆಯ ಚೆಕ್ಗಳ ಪೈಕಿ 5 ಚೆಕ್ಗಳನ್ನ ಅಂಬಿಕಾ ಅವರ ಹೆಸರಿನಲ್ಲಿ ಒಟ್ಟು 46 ಕೋಟಿ ಮೊತ್ತಕ್ಕೆ ನಗದೀಕರಣಕ್ಕಾಗಿ ಸಲ್ಲಿಸಲಾಗಿತ್ತು ಎಂದು ಬ್ಯಾಂಕ್ ಮಾಹಿತಿ ನೀಡಿದೆ. ತಕ್ಷಣವೇ ಬ್ಯಾಂಕ್ಗೆ ಪಾವತಿ ನಿಲ್ಲಿಸುವಂತೆ ಸೂಚಿಸಿದೆ. ಅಂಬಿಕಾ ಅವರಿಗೆ ನಾನು ಯಾವುದೇ ಚೆಕ್ಗಳನ್ನ ನೀಡಿಲ್ಲ, ಅಲ್ಲದೇ ಈ ಮೊತ್ತದ ಹಣ ಪಾವತಿಸುವಂತಹ ಯಾವುದೇ ಹಣಕಾಸಿನ ಒಪ್ಪಂದ ಅಥವಾ ವ್ಯವಹಾರ ತಮ್ಮಿಬ್ಬರ ನಡುವೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ಚೆಕ್ಗಳಲ್ಲಿ ವಿವರಗಳನ್ನ ತಮ್ಮ ಸಹೋದರ ಮಲ್ಲಿಕಾರ್ಜುನ ಅವರು ತುಂಬಿದ್ದಾರೆ. ಅಂಬಿಕಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಸೇರಿಕೊಂಡು ಕಾನೂನುಬಾಹಿರವಾಗಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ನಾನು ಚೆನ್ನೈನಲ್ಲಿ ಇಲ್ಲದ ಸಂದರ್ಭ ನೋಡಿ ನನ್ನ ರೂಮಿಂದ ಈ ಚೆಕ್ಗಳನ್ನ ತೆಗೆದುಕೊಳ್ಳಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.
ಇದೇ ವೇಳೆ ನಟಿ ರಾಧಾ, ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ತಮ್ಮ ಆಸ್ತಿ ವಿಚಾರದಲ್ಲಿ ಪ್ರವೇಶಿಸಲು ತನಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ನಟಿ ರಾಧಾ ಹೇಳಿದ್ದಾರೆ. ಆ ಆಸ್ತಿಯಲ್ಲಿ ಬೆಲೆಬಾಳುವ ವಸ್ತುಗಳು, ಆಭರಣಗಳು, ಆಸ್ತಿ ದಾಖಲೆಗಳು ಹಾಗೂ ಇತರ ಪ್ರಮುಖ ದಾಖಲೆಗಳು ಇವೆ ಎಂದು ತಿಳಿಸಿದ್ದಾರೆ.
ತಮ್ಮ ದೂರಿನಲ್ಲಿರುವ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಧಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಸಹೋದರಿಯ ಚೆಕ್ ನ್ನೇ ಅನುಮತಿ ಇಲ್ಲದೇ ಬಳಸಿ ಅಂಬಿಕಾ ಹಾಗೂ ಸಹೋದರ ಇಬ್ಬರೂ ಕೋಟಿ ಕೋಟಿ ಹಣ ಡ್ರಾ ಮಡಿ ವಂಚಿಸಿದರಾ? ಅಂಬಿಕಾ ವಿರುದ್ಧ ಅವರ ಸಹೋದರಿಯೇ ಮಾಡಿರುವ ಈ ಗಂಭೀರ ಆರೋಪ ಭಾರಿ ಚರ್ಚೆಗೆ ಕಾರಣವಾಗಿದೆ,

