ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಜೀವನಶೈಲಿಯ ಬಗ್ಗೆ ಜನರಲ್ಲಿ ಯಾವಾಗಲೂ ಕುತೂಹಲವಿರುತ್ತದೆ. ಅವರ ಐಷಾರಾಮಿ ನಿವಾಸ ‘ಆಂಟಿಲಿಯಾ’ದಲ್ಲಿ ನಡೆಯುವ ಭರ್ಜರಿ ಪಾರ್ಟಿಗಳು ಮತ್ತು ಅಲ್ಲಿ ತಯಾರಾಗುವ ರುಚಿಕರ ಅಡುಗೆಗಳ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ, ಇಷ್ಟೊಂದು ದೊಡ್ಡ ಶ್ರೀಮಂತರಾಗಿದ್ದರೂ ಅಂಬಾನಿ ಕುಟುಂಬದ ಆಹಾರ ಪದ್ಧತಿ ಮಾತ್ರ ಅತ್ಯಂತ ಸರಳವಾಗಿದೆ ಎಂಬುದು ವಿಶೇಷ.
ಅಂಬಾನಿ ಕುಟುಂಬದ ನೆಚ್ಚಿನ ಆಹಾರ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೇರಿದಂತೆ ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಟ್ಟುನಿಟ್ಟಾದ ಸಸ್ಯಾಹಾರವನ್ನು ಪಾಲಿಸುತ್ತಾರೆ. ಮುಂಜಾನೆ ಮುಖೇಶ್ ಅಂಬಾನಿ ಅವರು ಪಪ್ಪಾಯಿ ಜ್ಯೂಸ್ ಹಾಗೂ ಇಡ್ಲಿ-ಸಾಂಬಾರ್ ಸೇವಿಸುತ್ತಾರೆ. ಮಧ್ಯಾಹ್ನದ ಊಟದಲ್ಲಿ ಗುಜರಾತಿ ಶೈಲಿಯ ದಾಲ್, ಅನ್ನ, ತರಕಾರಿ ಪಲ್ಯ ಹಾಗೂ ರೊಟ್ಟಿ ಇರುತ್ತದೆ. ರಾತ್ರಿಯ ಹೊತ್ತು ನಾಚ್ನಿ ಅಥವಾ ಸಿರಿಧಾನ್ಯಗಳ ರೊಟ್ಟಿಯಂತಹ ಹಗುರವಾದ ಮತ್ತು ಪೌಷ್ಟಿಕ ಆಹಾರವನ್ನು ಅವರು ಇಷ್ಟಪಡುತ್ತಾರೆ. ವಾರಕ್ಕೊಮ್ಮೆ ಮುಖೇಶ್ ಅಂಬಾನಿ ಅವರಿಗೆ ಪ್ರಿಯವಾದ ಸೇವ್‌ಪುರಿಯನ್ನು ಮನೆಯಲ್ಲೇ ತಯಾರಿಸಲಾಗುತ್ತದೆ.
ದಿನಕ್ಕೆ 4,000 ರೊಟ್ಟಿ ತಯಾರಾಗಲು ಕಾರಣವೇನು? ಅಂಬಾನಿ ನಿವಾಸದಲ್ಲಿ ಪ್ರತಿದಿನ ಸಾವಿರಾರು ರೊಟ್ಟಿಗಳು ತಯಾರಾಗುತ್ತವೆ ಎಂಬ ಸುದ್ದಿ ಕೇಳಲು ಅಚ್ಚರಿಯಾಗಬಹುದು. ಆದರೆ, ಈ ರೊಟ್ಟಿಗಳು ಕೇವಲ ಅಂಬಾನಿ ಕುಟುಂಬಕ್ಕಾಗಿ ಅಲ್ಲ. ಆಂಟಿಲಿಯಾ ನಿವಾಸದಲ್ಲಿ ಕೆಲಸ ಮಾಡುವ ಸುಮಾರು 600 ಸಿಬ್ಬಂದಿಗಳಿಗಾಗಿ ಈ ಬೃಹತ್ ಪ್ರಮಾಣದ ಅಡುಗೆ ನಡೆಯುತ್ತದೆ. ಇದರಲ್ಲಿ ಭದ್ರತಾ ಸಿಬ್ಬಂದಿ, ಚಾಲಕರು, ಕ್ಲೀನರ್‌ಗಳು, ತಂತ್ರಜ್ಞರು ಮತ್ತು ವೈಯಕ್ತಿಕ ಸಹಾಯಕರು ಸೇರಿದ್ದಾರೆ. ಇವರೆಲ್ಲರಿಗೂ ಪ್ರತಿದಿನ ಪೌಷ್ಟಿಕಾಂಶಯುಕ್ತ ಆಹಾರವನ್ನು ಅಂಬಾನಿ ಕುಟುಂಬವೇ ಒದಗಿಸುತ್ತದೆ.
ಅಂಬಾನಿ ಮನೆಯಲ್ಲಿ ನಿಮಿಷಕ್ಕೆ ನೂರಾರು ಚಪಾತಿಗಳನ್ನು ಲಟ್ಟಿಸುವ ಅತ್ಯಾಧುನಿಕ ಯಂತ್ರಗಳಿವೆ. ಆದರೂ, ರುಚಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ನುರಿತ ಬಾಣಸಿಗರನ್ನು ನೇಮಿಸಿಕೊಳ್ಳಲಾಗಿದೆ.
ಬಾಣಸಿಗರ ಸಂಬಳ ಎಷ್ಟು ಗೊತ್ತೇ? ಮಾಧ್ಯಮ ವರದಿಗಳ ಪ್ರಕಾರ, ಅಂಬಾನಿ ಕುಟುಂಬದ ಅಡುಗೆ ಮನೆಯಲ್ಲಿ ಕೆಲಸ ಮಾಡುವ ಪ್ರಮುಖ ಬಾಣಸಿಗರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ನೀಡಲಾಗುತ್ತದೆ. ಪ್ರತಿಯೊಂದು ಚಪಾತಿಯೂ ಒಂದೇ ಗಾತ್ರ, ಮೆದು ಹಾಗೂ ರುಚಿಕರವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇವರ ಜವಾಬ್ದಾರಿಯಾಗಿದೆ. ಕೇವಲ ಸಂಬಳ ಮಾತ್ರವಲ್ಲದೆ, ಇಲ್ಲಿನ ಸಿಬ್ಬಂದಿಗಳಿಗೆ ವಿಮೆ ಮತ್ತು ಶಿಕ್ಷಣದ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ ಎನ್ನಲಾಗಿದೆ.

