ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ರೈತರು ಕೆರೆಯ ಹೂಳು ಅಥವಾ ಮಣ್ಣನ್ನು ಬಳಸಿಕೊಳ್ಳಲು ಸಂಬಂಧಪಟ್ಟವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದ್ದಾರೆ.
ಗಣಿಗಾರಿಕೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ರೈತರು ತಮ್ಮ ಜಮೀನಿನ ಕೃಷಿ ಉದ್ದೇಶಕ್ಕಾಗಿ ಮಣ್ಣು ಪಡೆಯುವ ಮೊದಲು ಕೆರೆಯ ಮಾಲೀಕತ್ವ ಹೊಂದಿರುವ ಸಣ್ಣ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಥವಾ ಗ್ರಾಮ ಪಂಚಾಯತಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದರು.
ಅನುಮತಿ ಕೋರುವಾಗ ರೈತರು ತಮ್ಮ ಜಮೀನಿನ ಪಹಣಿ ಮತ್ತು ಕೃಷಿ ಚಟುವಟಿಕೆಯ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಕೃಷಿ ಉದ್ದೇಶಕ್ಕಾಗಿ ಕೇವಲ ಟ್ರಾಕ್ಟರ್‌ಗಳ ಮೂಲಕ ಮಾತ್ರ ಮಣ್ಣು ಸಾಗಿಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಟ್ರಕ್ ಅಥವಾ ಲಾರಿಗಳನ್ನು ಬಳಸುವಂತಿಲ್ಲ ಎಂದು ಹೇಳಿದರು.
ಮಣ್ಣು ತೆಗೆಯುವಾಗ ಕೆರೆಯ ಒಳಭಾಗದಲ್ಲಿ ಒಂದು ಮೀಟರ್‌ಗಿಂತ ಹೆಚ್ಚು ಆಳಕ್ಕೆ ಗುಂಡಿ ತೋಡುವಂತಿಲ್ಲ. ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಇದು ಕೆರೆಯ ಮೂಲ ವಿನ್ಯಾಸಕ್ಕೆ ಧಕ್ಕೆ ತರದಂತೆ ಇರಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಯಾವುದೇ ವ್ಯಕ್ತಿ ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಗುತ್ತಿಗೆ ಆಧಾರಿತ ಕಾಮಗಾರಿಗಳಿಗಾಗಿ ಕೆರೆ ಮಣ್ಣು ಅಥವಾ ಗ್ರ‍್ಯಾವೆಲ್ ಬಳಸುತ್ತಿದ್ದರೆ, ಅವರು ಕಡ್ಡಾಯವಾಗಿ ಗಣಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಂತಹ ಬಳಕೆಗೆ ನಿಗದಿಪಡಿಸಿದ ರಾಜಧನ ಸರ್ಕಾರಕ್ಕೆ ಪಾವತಿಸುವುದು ಕಡ್ಡಾಯವಾಗಿದೆ.
ಒಂದು ವೇಳೆ ನಿಯಮ ಮೀರಿ ಯಾರಾದರು ಮಣ್ಣು ಸಾಗಿಸಿದರೆ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಇಒಗಳು, ಗಣಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನವನ್ನು ಜಿಲ್ಲಾಧಿಕಾರಿ ನೀಡಿದರು.
ರೈತರು ತಮ್ಮ ತೋಟ ಅಥವಾ ಜಮೀನಿಗೆ ಕೆರೆಯ ಮಣ್ಣನ್ನು ಸಾಗಿಸುವಾಗ, ಆ ಮಣ್ಣಿನಲ್ಲಿರುವ ಖನಿಜಾಂಶಗಳ ಬಗ್ಗೆ ವರದಿ ಕೇಳುವುದು ಅಥವಾ ಪರೀಕ್ಷಿಸುವುದು ಅನಗತ್ಯ. ರೈತರು ಕೃಷಿ ಚಟುವಟಿಕೆಗಾಗಿ ಮಣ್ಣು ಬಳಸುತ್ತಿದ್ದರೆ, ಅದರಲ್ಲಿ ಯಾವ ಖನಿಜಾಂಶ ಇದೆ ಎಂದು ಪರೀಕ್ಷಿಸುವ ಅವಶ್ಯಕತೆಯಿಲ್ಲ ಎಂದರು.
ಮಣ್ಣನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಅಥವಾ ಮಾರಾಟ ಮಾಡುತ್ತಿದ್ದರೆ ಮಾತ್ರ ಗಣಿ ಇಲಾಖೆಯ ನಿಯಮಗಳ ಪ್ರಕಾರ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ವರದಿ ನೀಡುವುದರಿಂದ ಸರ್ಕಾರದ ಮಟ್ಟದಲ್ಲಿ ತಪ್ಪು ಸಂದೇಶ ಹೋಗುತ್ತದೆ. ಗೊಂದಲ ಉಂಟಾಗುತ್ತದೆ. ಅಧಿಕಾರಿಗಳು ಈ ಕುರಿತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

