ಏಪ್ರಿಲ್‌ನಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಂಜೆ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನು ಈ ಐದು ರಾಜ್ಯಗಳ ಪೈಕಿ ಭಾರೀ ಕುತೂಹಲವನ್ನು ಕೆರಳಿಸಿದ್ದ ತಮಿಳುನಾಡಿನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಪ್ರಶ್ನೆ ಮೂಡಿತ್ತು. ಸದ್ಯ ರಾಜ್ಯದ 234 ಸೀಟುಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಡಿಎಂಕೆ 66 ಹಾಗೂ ಎಐಎಡಿಎಂಕೆ 56 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಆದರೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕನಿಷ್ಟ 118 ಸೀಟುಗಳ ಅವಶ್ಯಕತೆಯಿದೆ. ಸದ್ಯದ ಟ್ರೆಂಟ್ ಪ್ರಕಾರ ಟಿವಿಕೆಗೆ ಇನ್ನೂ 8 ಸೀಟುಗಳ ಅವಶ್ಯಕತೆಯಿದ್ದು, ಮೈತ್ರಿಯ ಪ್ರಮೇಯ ತಲೆತೋರಿದೆ.
ಹೌದು, ಟಿವಿಕೆ 118 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಷ್ಟಕರವಾಗಿದ್ದು, ಉಳಿದ ಸ್ಥಾನಗಳಿಗಾಗಿ ಮೈತ್ರಿಯ ಮೊರೆಹೋಗಲೇಬೇಕಿದೆ. ಟಿವಿಕೆಗೆ ಮೂರು ಆಯ್ಕೆಗಳಿದ್ದು, ಅವುಗಳ ಕುರಿತ ಮಾಹಿತಿ ಮುಂದಿದೆ.
1. ಬಿಜೆಪಿ ಬೆಂಬಲ ಬಿಟ್ಟರೆ ಎಐಎಡಿಎಂಕೆ ಜತೆ ಮೈತ್ರಿ: ವಿಜಯ್ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ದೂರದ ಮಾತು. ಏಕೆಂದರೆ ಚುನಾವಣೆಗೂ ಮುನ್ನವೇ ಬಿಜೆಪಿ ತನ್ನ ತತ್ವದ ವಿರೋಧಿ ಎಂದು ಹೇಳಿಕೊಂಡಿದ್ದ ವಿಜಯ್ ಅದೇ ಪಕ್ಷದ ಬೆಂಬಲ ಹೊಂದಿರುವ ಎಐಎಡಿಎಂಕೆ ಜತೆ ಕೈಜೋಡಿಸುವುದು ಕಷ್ಟ. ಒಂದು ವೇಳೆ ಎಐಎಡಿಎಂಕೆ ಬಿಜೆಪಿ ಬಿಟ್ಟು ಬಂದರೆ ಮೈತ್ರಿಯಾಗುವ ಸಾಧ್ಯತೆಗಳಿವೆ.
2. ಸಣ್ಣ ಪಕ್ಷಗಳ ಜತೆ ಮೈತ್ರಿ: ತಮಿಳುನಾಡಿನಲ್ಲಿ ದೊಡ್ಡ ಪಕ್ಷಗಳನ್ನು ಹೊರತುಪಡಿಸಿ ಪಿಎಂಕೆ 5, ಸಿಪಿಐ 3, ಐಯುಎಂಎಲ್ 2, ಡಿಎಂಡಿಕೆ 1, ವಿಸಿಕೆ 1, ಅಮ್ಮ ಮಕ್ಕಳ್ ಮುನೆಟ್ರ ಕಳಗಮ್ 1 ಹಾಗೂ ಸಿಪಿಐಎಂ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿವೆ. ಹೀಗಾಗಿ ಟಿವಿಕೆ ಎಐಎಡಿಎಂಕೆ ಬದಲಾಗಿ ಈ ಸಣ್ಣ ಪಕ್ಷಗಳನ್ನು ಬೆಂಬಲಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
3. ಕಾಂಗ್ರೆಸ್ ಕೈ ಹಿಡಿಯುವುದು: ಒಂದುವೇಳೆ ಇತರೆ ಸಣ್ಣ ಪಕ್ಷಗಳ ಸಹಾಯದಿಂದಲೂ ಸ್ಪಷ್ಟ ಬಹುಮತ ಅನುಮಾನವೆಂದರೆ ಆಗ ಟಿವಿಕೆ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್‌ನಿಂದ ಬಾಹ್ಯ ಬೆಂಬಲದ ಮೊರೆಹೋಗುವ ಸಾಧ್ಯತೆಗಳಿವೆ.

