ಹೈದರಾಬಾದ್: ದೇಶದ ಪ್ರತಿಷ್ಠಿತ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಎನ್‌ಪಿಎ)ಯಲ್ಲಿ ಲೈಂಗಿಕ ಕಿರುಕುಳದ ಆರೋಪ ಸಂಚಲನ ಸೃಷ್ಟಿಸಿದೆ. ಸಹ ತರಬೇತಿ ಪಡೆಯುತ್ತಿರುವ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ತರಬೇತಿ ಐಪಿಎಸ್ ಅಧಿಕಾರಿ ಉದಯ್ ಕೃಷ್ಣರೆಡ್ಡಿ ವಿರುದ್ಧ ಅತ್ತಾಪುರ್ ಪೊಲೀಸರು ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಹೈದರಾಬಾದ್: ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (NPA)ಯಲ್ಲಿ ಲೈಂಗಿಕ ಕಿರುಕುಳದ ಆರೋಪ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸಹ ತರಬೇತಿ ಪಡೆಯುತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ತರಬೇತಿ ಐಪಿಎಸ್ ಅಧಿಕಾರಿ ಉದಯ್ ಕೃಷ್ಣರೆಡ್ಡಿ ವಿರುದ್ಧ ಅತ್ತಾಪುರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರು ನೀಡಿರುವ ಮಹಿಳಾ ತರಬೇತಿ ಐಪಿಎಸ್ ಅಧಿಕಾರಿ, ಉದಯ್ ಕೃಷ್ಣರೆಡ್ಡಿ ನಿರಂತರವಾಗಿ ಅಸಭ್ಯ ಸಂದೇಶಗಳನ್ನು ಕಳುಹಿಸಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಆರೋಪಿಸಿದ್ದಾರೆ.
ಚಾಕುವಿನಿಂದ ಬೆದರಿಕೆ, ಖಾಸಗಿ ವಿಡಿಯೋ ಚಿತ್ರೀಕರಣ ಆರೋಪ
ದೂರಿನ ಪ್ರಕಾರ, ಜುಲೈ 9ರಂದು ಆರೋಪಿ ಉದಯ್ ಕೃಷ್ಣರೆಡ್ಡಿ ಮಹಿಳಾ ಅಧಿಕಾರಿಯನ್ನು ಕೂದಲು ಹಿಡಿದು ಬಲವಂತವಾಗಿ ಕೊಠಡಿಗೆ ಎಳೆದುಕೊಂಡು ಹೋಗಿ, ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೆ, ಆಕೆಯ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡು, ಆ ವಿಡಿಯೋಗಳನ್ನು ಆಕೆಯ ಪತಿಗೆ ವಾಟ್ಸ್ಆಪ್ ಮೂಲಕ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರು ಸೆಕ್ಷನ್ಗಳಡಿ ಪ್ರಕರಣ
ಬಾಧಿತೆಯ ದೂರಿನ ಆಧಾರದ ಮೇಲೆ ಅತ್ತಾಪುರ್ ಪೊಲೀಸರು ಉದಯ್ ಕೃಷ್ಣರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74, 75, 77, 315(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಸೆಕ್ಷನ್ 66(C) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪೊಲೀಸರು ಶೀಘ್ರದಲ್ಲೇ ಆರೋಪಿ ಉದಯ್ ಕೃಷ್ಣರೆಡ್ಡಿಯ ಹೇಳಿಕೆಯನ್ನು ದಾಖಲಿಸಲು ಸಿದ್ಧತೆ ನಡೆಸಿದ್ದು, ಪ್ರಕರಣದ ತನಿಖೆಯನ್ನು ವೇಗಗೊಳಿಸಿದ್ದಾರೆ.ದೇಶದ ಅತ್ಯುನ್ನತ ಪೊಲೀಸ್ ತರಬೇತಿ ಸಂಸ್ಥೆಯಲ್ಲೇ ಭವಿಷ್ಯದ ಐಪಿಎಸ್ ಅಧಿಕಾರಿಗಳ ನಡುವೆ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

