ಧಾರವಾಡ : ನಮ್ಮ ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಯ ದಿಕ್ಸೂಚಿ ಯಾವುದು ಗೊತ್ತೇ? ಅದುವೇ ನೈಜ ಅಂಕಿ-ಅಂಶಗಳನ್ನು ನೀಡುವ ‘ಜನಗಣತಿ’. 2027ರ ಜನಗಣತಿ ಪ್ರಕ್ರಿಯೆ ಈಗ ಆರಂಭವಾಗಿದ್ದು, ನಮ್ಮ ಪ್ರಧಾನಮಂತ್ರಿಗಳ ‘ಡಿಜಿಟಲ್ ಇಂಡಿಯಾ’ ಕನಸಿನಂತೆ, ಈ ಬಾರಿ ನಮಗೆ ‘ಸ್ವಯಂ-ಗಣತಿ’ (Self-Enumeration) ಮಾಡುವ ಅದ್ಭುತ ಅವಕಾಶ ಸಿಕ್ಕಿದೆ. ಎಲ್ಲ ನಾಗರಿಕರು ಸ್ವಯಂ ಗಣತಿಯಲ್ಕಿ ಸಕ್ರಿಯವಾಗಿ ಭಾಗವಹಿಸಲು ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾನು ಈಗಾಗಲೇ ಆನ್‍ಲೈನ್ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ನನ್ನ ಮತ್ತು ನನ್ನ ಕುಟುಂಬದ ವಿವರಗಳನ್ನು ದಾಖಲಿಸಿದ್ದೇನೆ. ಇದು ಕೇವಲ ಅಂಕಿ-ಅಂಶಗಳಲ್ಲ, ನಮ್ಮ ದೇಶದ ಪ್ರಗತಿಯಲ್ಲಿ ನಾವು ನೀಡುವ ಅಳಿಲು ಸೇವೆ.
ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15, 2026ರವರೆಗೆ ಈ ಡಿಜಿಟಲ್ ಸೌಲಭ್ಯ ಲಭ್ಯವಿದೆ. ನೀವು ಮಾಡಬೇಕಾಗಿರುವುದು ಇಷ್ಟೇ:
se.census.gov.in ಪೋರ್ಟಲ್‌ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಆಗಿ.
ನಿಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಸರಳವಾಗಿ ಭರ್ತಿ ಮಾಡಿ.
ದಾಖಲಿಸಿದ ನಂತರ ಬರುವ SE ID ಅನ್ನು ಜೋಪಾನವಾಗಿ ಇಟ್ಟುಕೊಳ್ಳಿ.ಇದರಿಂದ ನಿಮ್ಮ ಸಮಯ ಉಳಿಯುತ್ತದೆ ಮತ್ತು ನಿಖರವಾದ ಮಾಹಿತಿ ದಾಖಲಾಗುತ್ತದೆ. ನಂತರ ಗಣತಿದಾರರು ಮನೆಗೆ ಬಂದಾಗ, ನೀವು ಕೇವಲ ಈ SE ID ನೀಡಿದರೆ ಸಾಕು, ಅವರು ನಿಮ್ಮ ವಿವರಗಳನ್ನು ತಕ್ಷಣವೇ ದೃಢೀಕರಿಸುತ್ತಾರೆ.
ಬನ್ನಿ, ಜವಾಬ್ದಾರಿಯುತ ನಾಗರಿಕರಾಗಿ ಈ ರಾಷ್ಟ್ರೀಯ ಅಭಿಯಾನದಲ್ಲಿ ಭಾಗವಹಿಸೋಣ. ಹೆಮ್ಮೆಯಿಂದ ಹೇಳೋಣ – ‘ನನ್ನ ಗಣತಿ, ದೇಶದ ಶಕ್ತಿ’.
ನಿಮ್ಮ ವಿವರಗಳನ್ನು ಇಂದೇ ಆನ್‍ಲೈನ್‍ನಲ್ಲಿ ದಾಖಲಿಸಿ, ಸುಭದ್ರ ಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

