HomeIndiaವೈದ್ಯಕೀಯ ಲೋಕದ ಮಹಾ ಎಡವಟ್ಟು: ಯುವಕ ಗರ್ಭಿಣಿ ಎಂದು ವರದಿ ನೀಡಿದ ಅಲಿಗಢದ ಖಾಸಗಿ ನರ್ಸಿಂಗ್...

ವೈದ್ಯಕೀಯ ಲೋಕದ ಮಹಾ ಎಡವಟ್ಟು: ಯುವಕ ಗರ್ಭಿಣಿ ಎಂದು ವರದಿ ನೀಡಿದ ಅಲಿಗಢದ ಖಾಸಗಿ ನರ್ಸಿಂಗ್ ಹೋಮ್

ಅಲಿಗಢ: ವೈದ್ಯಕೀಯ ಲೋಕದಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದ ಘಟನೆಯೊಂದು ಯುವಕನೊಬ್ಬನನ್ನು ಅಕ್ಷರಶಃ ಕಣ್ಣೀರು ಹಾಕುವಂತೆ ಮಾಡಿದೆ. ಹೊಟ್ಟೆನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ 22 ವರ್ಷದ ಯುವಕನಿಗೆ ವೈದ್ಯರು ಆತ ‘ಗರ್ಭಿಣಿ’ ಎಂಬ ರಿಪೋರ್ಟ್ ನೀಡಿ ಶಾಕ್ ನೀಡಿದ್ದಾರೆ. ಈ ವಿಲಕ್ಷಣ ಘಟನೆಯಿಂದಾಗಿ ಯುವಕ ಈಗ ಸಮಾಜದಲ್ಲಿ ಹಾಸ್ಯದ ವಸ್ತುವಾಗಿದ್ದು, ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದಾನೆ.

ಅಲಿಗಢ ಜಿಲ್ಲೆಯ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ದರ್ಶನ್ ಎಂಬ ಯುವಕ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ನೋವು ತಡೆಯಲಾಗದೆ ರಾಮ್‌ಘಾಟ್ ರಸ್ತೆಯಲ್ಲಿರುವ ಸನ್‌ರೈಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದನು. ಯುವಕನನ್ನು ಪರೀಕ್ಷಿಸಿದ ವೈದ್ಯರು ನೋವಿನ ಕಾರಣ ಪತ್ತೆಹಚ್ಚಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದರು. ಆದರೆ ಸ್ಕ್ಯಾನಿಂಗ್ ವರದಿ ಬಂದಾಗ ಸ್ವತಃ ದರ್ಶನ್ ಮತ್ತು ಆತನ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ವರದಿಯಲ್ಲಿ ಯುವಕನ ಹೊಟ್ಟೆಯಲ್ಲಿ ಭ್ರೂಣವಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ಗರ್ಭಧಾರಣೆಯು ‘ಫಾಲೋಪಿಯನ್ ಟ್ಯೂಬ್’ನಲ್ಲಿದೆ ಮತ್ತು ಕಿಡ್ನಿ ಟ್ಯೂಬ್‌ನಲ್ಲಿ ಊತವಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಪುರುಷನೊಬ್ಬ ಗರ್ಭಿಣಿಯಾಗಲು ಹೇಗೆ ಸಾಧ್ಯ ಎಂದು ತಿಳಿಯದ ದರ್ಶನ್, ಆಸ್ಪತ್ರೆಯ ಈ ಎಡವಟ್ಟಿನಿಂದಾಗಿ ದಿಕ್ಕುತೋಚದಂತಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಸುತ್ತಮುತ್ತಲ ಜನರು ಆತನನ್ನು ನೋಡಿ ಅಪಹಾಸ್ಯ ಮಾಡಲು ಶುರು ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಗಂಭೀರ ನಿರ್ಲಕ್ಷ್ಯದ ವಿರುದ್ಧ ದರ್ಶನ್ ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗೆ (CMO) ದೂರು ನೀಡಿದ್ದಾನೆ. ಆಸ್ಪತ್ರೆಯ ಈ ಬೇಜವಾಬ್ದಾರಿತನದಿಂದ ತನಗೆ ಮಾನಸಿಕವಾಗಿ ತುಂಬಾ ನೋವಾಗಿದೆ ಎಂದು ಆತ ಅಳಲು ತೋಡಿಕೊಂಡಿದ್ದಾನೆ. ವರದಿಯಲ್ಲಿನ ತಪ್ಪನ್ನು ಒಪ್ಪಿಕೊಂಡಿರುವ ಡಾ. ಅಲೋಕ್ ಗುಪ್ತಾ, ವರದಿ ಮುದ್ರಿಸುವಾಗ ಬೇರೊಬ್ಬ ರೋಗಿಯ ವರದಿಯೊಂದಿಗೆ ಅದಲುಬದಲಾಗಿರಬಹುದು ಎಂದು ಸಮಜಾಯಿಷಿ ನೀಡಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆಸ್ಪತ್ರೆಯ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular