ಬಾಲಿವುಡ್‌ನ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ಆಲಿಯಾ ಭಟ್ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡುವ ಮೂಲಕ ಗಾಳಿ ಮಾತುಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಆಲಿಯಾ, ಅಂತರ್ಜಾಲದಲ್ಲಿ ಹರಿದಾಡುವ ಇಂತಹ ಚರ್ಚೆಗಳನ್ನು ಬರೀ “ಶಬ್ದ” (Noise) ಎಂದು ಕರೆದಿದ್ದಾರೆ. “ಜನರು ಕೇವಲ ಮೂರ್ನಾಲ್ಕು ಸೆಕೆಂಡುಗಳ ವಿಡಿಯೋ ಅಥವಾ ಫೋಟೋ ನೋಡಿ ನಮ್ಮ ಸಂಬಂಧದ ಬಗ್ಗೆ ತೀರ್ಮಾನಕ್ಕೆ ಬರುತ್ತಾರೆ. ಆದರೆ ನಾವು ಕಳೆದ ಏಳು ವರ್ಷಗಳಿಂದ ಜೊತೆಯಾಗಿದ್ದೇವೆ. ಜನರು ಕಾಮೆಂಟ್ ಮಾಡುವ ಆ ಕೆಲವು ಸೆಕೆಂಡುಗಳಿಗಿಂತ ನಮ್ಮ ಏಳು ವರ್ಷಗಳ ಸುದೀರ್ಘ ಸಂಬಂಧ ದೊಡ್ಡದು. ಈ ವದಂತಿಗಳು ನಮ್ಮ ವೈಯಕ್ತಿಕ ಜೀವನದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವೊಮ್ಮೆ ಇಂತಹ ಮೀಮ್‌ಗಳನ್ನು ನೋಡಿ ನಾವು ನಗುತ್ತೇವೆ ಹೊರತು, ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. “ನನ್ನ ವಾಸ್ತವ ಬದಲಾಗುತ್ತಿದೆಯೇ? ಇಲ್ಲ. ನನ್ನ ಕುಟುಂಬದ ನೆಮ್ಮದಿ ಕೆಡುತ್ತಿದೆಯೇ? ಖಂಡಿತ ಇಲ್ಲ. ನಾನು ಅಂದುಕೊಂಡಂತೆ ಬದುಕುತ್ತಿದ್ದೇನೆ ಮತ್ತು ಪ್ರತಿದಿನ ನೆಮ್ಮದಿಯಿಂದ ಮಲಗುತ್ತಿದ್ದೇನೆ” ಎನ್ನುವ ಮೂಲಕ ತಮ್ಮ ಮತ್ತು ರಣಬೀರ್ ನಡುವಿನ ಬಂಧ ಗಟ್ಟಿಯಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.
2018ರಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾದ ಚಿತ್ರೀಕರಣದ ವೇಳೆ ಪ್ರೀತಿಸತೊಡಗಿದ್ದ ಈ ಜೋಡಿ, 2022ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಈ ದಂಪತಿಗೆ ರಾಹಾ ಎಂಬ ಪುತ್ರಿ ಜನಿಸಿದ್ದಾಳೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಅಂಡ್ ವಾರ್’ ಚಿತ್ರದಲ್ಲಿ ಆಲಿಯಾ ಮತ್ತು ರಣಬೀರ್ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದಲ್ಲದೆ ಆಲಿಯಾ ‘ಆಲ್ಫಾ’ ಚಿತ್ರದಲ್ಲಿ ಮತ್ತು ರಣಬೀರ್ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

