ಬೆಂಗಳೂರು: ಅಕ್ಷಯ ತೃತೀಯ ಬಂತೆಂದರೆ ಸಾಕು, ಮನೆಗೆ ಒಂದು ಗ್ರಾಂ ಚಿನ್ನವನ್ನಾದರೂ ತರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಈ ವರ್ಷ ಏಪ್ರಿಲ್ 19ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತದ ನಡುವೆಯೂ ಗ್ರಾಹಕರಿಗೆ ಒಂದಿಷ್ಟು ಸಮಾಧಾನಕರ ಸುದ್ದಿ ಇದೆ. ಜನವರಿಯಲ್ಲಿ 1.34 ಲಕ್ಷ ರೂಪಾಯಿಗೆ ಏರಿಕೆ ಕಂಡಿದ್ದ ಚಿನ್ನದ ದರ, ಈಗ ಯುದ್ಧದ ನಡುವೆಯೂ ಒಂದಿಷ್ಟು ಇಳಿಕೆಯ ಹಾದಿ ಹಿಡಿದಿದೆ. ಈ ಸಂದರ್ಭವನ್ನು ಬಳಸಿಕೊಂಡು ಲಾಭದಾಯಕವಾಗಿ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್.
ಬುಕಿಂಗ್ ಟ್ರಿಕ್ ಬಳಸಿ ಹಣ ಉಳಿಸಿ
ಹಬ್ಬದ ದಿನ ಹತ್ತಿರ ಬಂದಂತೆ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಮಾರ್ಟ್ ಗ್ರಾಹಕರು ‘ಅಡ್ವಾನ್ಸ್ ಬುಕಿಂಗ್’ ಮೊರೆ ಹೋಗುವುದು ಉತ್ತಮ.
ಚಿನ್ನದ ದರ ಎಂದು ಕಡಿಮೆ ಇರುತ್ತದೆಯೋ ಅಂದೇ ಒಂದಿಷ್ಟು ಹಣ ಪಾವತಿಸಿ ಬುಕ್ ಮಾಡಿ.
ಅಕ್ಷಯ ತೃತೀಯದ ದಿನದಂದು ಬೆಲೆ ಏರಿಕೆಯಾಗಿದ್ದರೂ, ನೀವು ಬುಕ್ ಮಾಡಿದ ದಿನದ ಕಡಿಮೆ ದರದಲ್ಲೇ ಚಿನ್ನವನ್ನು ನಿಮ್ಮದಾಗಿಸಿಕೊಳ್ಳಬಹುದು.
ಜ್ಯುವೆಲ್ಲರಿ ಶಾಪ್‌ಗಳ ಆಫರ್ ಮೇಲೆ ಕಣ್ಣಿರಲಿ
ಅಕ್ಷಯ ತೃತೀಯದ ಅಂಗವಾಗಿ ಬಹುತೇಕ ಆಭರಣ ಮಳಿಗೆಗಳು ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತವೆ:
ಮೇಕಿಂಗ್ ಚಾರ್ಜ್ ಇರುವುದಿಲ್ಲ: ಆಭರಣ ತಯಾರಿಕಾ ವೆಚ್ಚದ ಮೇಲೆ ಶೇ. 100 ರಷ್ಟು ರಿಯಾಯಿತಿ ಸಿಗಬಹುದು.
ಹಳೇ ಚಿನ್ನಕ್ಕೆ ಹೊಸ ಮೆರುಗು: ಹಳೇ ಚಿನ್ನ ನೀಡಿ ಹೊಸ ಆಭರಣ ಪಡೆಯುವಾಗ ಹೆಚ್ಚಿನ ಎಕ್ಸ್‌ಚೇಂಜ್ ವ್ಯಾಲ್ಯೂ ಸಿಗುವ ಸಾಧ್ಯತೆ ಇರುತ್ತದೆ.
ಉಡುಗೊರೆಗಳ ಸುರಿಮಳೆ: 10 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಖರೀದಿಸಿದರೆ ಖಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವ
ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನಿರ್ಧಾರ ಮತ್ತು ಅಮೆರಿಕನ್ ಡಾಲರ್ ಮೌಲ್ಯವು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರಸ್ತುತ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿದೆ. ಆದ್ದರಿಂದ, ಪ್ರತಿದಿನದ ಚಿನ್ನದ ದರದ ಅಪ್‌ಡೇಟ್ ಪಡೆಯುವುದು ಬಲು ಮುಖ್ಯ.
ಹಾಲ್‌ಮಾರ್ಕ್ ಮರೆಯಬೇಡಿ
ಚಿನ್ನ ಎಷ್ಟೇ ಕಡಿಮೆ ಬೆಲೆಗೆ ಸಿಕ್ಕರೂ ಅದರ ಶುದ್ಧತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಆಭರಣದ ಮೇಲೆ ಬಿಐಎಸ್ (BIS) ಹಾಲ್‌ಮಾರ್ಕ್ ಲೋಗೋ ಮತ್ತು ಶುದ್ಧತೆಯನ್ನು ತಿಳಿಸುವ ಕೋಡ್ ಇದೆಯೇ ಎಂದು ಪರೀಕ್ಷಿಸಿ ಖರೀದಿಸಿ.

