HomeLatest Newsಅಕ್ಷಯ ತೃತೀಯ 2026 : ಈ ದಿನ ಚಿನ್ನ ಖರೀದಿಸುವ ಹಿಂದಿನ ಅಸಲಿ ಕಾರಣವೇನು ಗೊತ್ತೇ...

ಅಕ್ಷಯ ತೃತೀಯ 2026 : ಈ ದಿನ ಚಿನ್ನ ಖರೀದಿಸುವ ಹಿಂದಿನ ಅಸಲಿ ಕಾರಣವೇನು ಗೊತ್ತೇ ?

ಅಕ್ಷಯ ತೃತೀಯ ಎಂದರೆ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುವ ಅತ್ಯಂತ ಪವಿತ್ರವಾದ ಹಬ್ಬ. ಹಿಂದೂ ಮತ್ತು ಜೈನ ಸಂಪ್ರದಾಯಗಳಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ದಿಗ್ವಿಜಯವಾಗುತ್ತದೆ ಮತ್ತು ‘ಅಕ್ಷಯ’ವಾಗಿ (ಕ್ಷಯವಿಲ್ಲದಂತೆ) ವೃದ್ಧಿಯಾಗುತ್ತದೆ ಎಂಬ ಗಾಢವಾದ ನಂಬಿಕೆ ಜನರಲ್ಲಿದೆ. ‘ಅಕ್ಷಯ’ ಎಂದರೆ ನಾಶವಿಲ್ಲದ್ದು ಮತ್ತು ‘ತೃತೀಯ’ ಎಂದರೆ ಮೂರನೇ ದಿನ ಎಂದು ಅರ್ಥ.

ಅಕ್ಷಯ ತೃತೀಯದ ಪೌರಾಣಿಕ ಹಿನ್ನೆಲೆ

ಅಕ್ಷಯ ತೃತೀಯಕ್ಕೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಬಹಳಷ್ಟಿದೆ. ನಾಲ್ಕು ಯುಗಗಳಲ್ಲಿ ಪ್ರಮುಖವಾದ ತ್ರೇತಾಯುಗವು ಇದೇ ದಿನ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮರು ಜನಿಸಿದ ಶುಭ ದಿನವೂ ಇದೇ ಆಗಿದೆ. ವೇದವ್ಯಾಸರು ಗಣಪತಿಯ ಸಹಾಯದಿಂದ ಮಹಾಭಾರತವನ್ನು ರಚಿಸಲು ಪ್ರಾರಂಭಿಸಿದ್ದು ಇದೇ ಅಕ್ಷಯ ತೃತೀಯದಂದು. ಶ್ರೀಕೃಷ್ಣನು ತನ್ನ ಬಾಲ್ಯದ ಗೆಳೆಯ ಸುಧಾಮನನ್ನು ಭೇಟಿಯಾದ ದಿನವೂ ಇದೇ ಆಗಿದೆ. ಭಗೀರಥನ ಪ್ರಯತ್ನದಿಂದ ಪವಿತ್ರ ಗಂಗೆಯು ಭೂಮಿಗೆ ಹರಿಯಲು ಪ್ರಾರಂಭಿಸಿದ ಸಮಯ ಹಾಗೂ ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಗೆ ‘ಅಕ್ಷಯ ಪಾತ್ರೆ’ ಲಭಿಸಿದ ದಿನವನ್ನೂ ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.

ಈ ಪವಿತ್ರ ದಿನದಂದು ಪುಣ್ಯಕ್ಷೇತ್ರಗಳ ದರ್ಶನ, ಪುಣ್ಯ ಸ್ನಾನ, ಉಪವಾಸ ಮಾಡುವುದು ಅನಾದಿ ಕಾಲದಿಂದಲೂ ಬಂದಿರುವ ಸಂಪ್ರದಾಯ. ಗಣಪತಿ, ಮಹಾಲಕ್ಷ್ಮಿ, ಮಹಾವಿಷ್ಣು ಮತ್ತು ಕುಬೇರನನ್ನು ಆರಾಧಿಸುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ವಿವಾಹ, ಗೃಹಪ್ರವೇಶ, ಹೊಸ ವ್ಯಾಪಾರ ಅಥವಾ ಭೂಮಿ ಖರೀದಿಗೆ ಈ ದಿನ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನದ ಖರೀದಿಯ ಹಿಂದಿನ ನಂಬಿಕೆ

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಒಂದು ಪ್ರಮುಖ ಸಂಪ್ರದಾಯವಾಗಿ ಬದಲಾಗಿದೆ. ಈ ದಿನ ಸ್ವಲ್ಪವಾದರೂ ಚಿನ್ನ ಖರೀದಿಸಿದರೆ ಮನೆಯಲ್ಲಿ ಸಿರಿಸಂಪತ್ತು ನೆಲೆಸುತ್ತದೆ ಎಂಬ ನಂಬಿಕೆ ತಲೆತಲಾಂತರಗಳಿಂದ ಬಂದಿದೆ. ಭಾರತೀಯರು ಚಿನ್ನವನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಭಾವಿಸುತ್ತಾರೆ. ಅಕ್ಷಯ ತೃತೀಯದ ಶುಭ ಮುಹೂರ್ತದಲ್ಲಿ ಚಿನ್ನ ಖರೀದಿಸುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗುತ್ತದೆ. ಇದು ಕೇವಲ ಅಲಂಕಾರಿಕ ವಸ್ತುವಲ್ಲದೆ, ತುರ್ತು ಸಮಯದಲ್ಲಿ ಆಪದ್ಬಾಂಧವನಂತೆ ಸಹಕರಿಸುವ ಆರ್ಥಿಕ ಹೂಡಿಕೆ ಎಂದೂ ಜನ ಪರಿಗಣಿಸುತ್ತಾರೆ.

ಚಿನ್ನವೇ ಆಗಬೇಕಿಲ್ಲ…

ಎಲ್ಲರೂ ಚಿನ್ನವನ್ನೇ ಖರೀದಿಸಬೇಕೆಂಬ ನಿಯಮವೇನೂ ಇಲ್ಲ. ತಮ್ಮ ಶಕ್ತಿಗೆ ಅನುಗುಣವಾಗಿ ಬೆಳ್ಳಿ, ವಜ್ರ ಅಥವಾ ಇತರ ಅಮೂಲ್ಯ ಲೋಹಗಳನ್ನು ಖರೀದಿಸಬಹುದು ಅಥವಾ ಯಾವುದೇ ಹೊಸ ಶುಭ ಕಾರ್ಯವನ್ನು ಆರಂಭಿಸಬಹುದು. ಈ ವರ್ಷ ಏಪ್ರಿಲ್ 30 ರಂದು ಅಕ್ಷಯ ತೃತೀಯ ಬಂದಿದೆ. ಹೂಡಿಕೆ ಮತ್ತು ಖರೀದಿಗೆ ಈ ದಿನ ಉತ್ತಮವಾಗಿರುವುದರಿಂದ ಆಭರಣ ಮಳಿಗೆಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ.

ಗಮನಿಸಿ: ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಪಂಡಿತರ ಅಭಿಪ್ರಾಯಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದು ಓದುಗರ ಗಮನಕ್ಕಿರಲಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular