ಭಾರತೀಯ ಮನೆಗಳಲ್ಲಿ ಶೀತ, ಕೆಮ್ಮು ಕಾಣಿಸಿಕೊಂಡ ತಕ್ಷಣ ನೆನಪಿಗೆ ಬರುವುದು ಅಜವಾನ ಅಥವಾ ಓಮಕಾಳು. ತಲೆಮಾರುಗಳಿಂದಲೂ ಬಳಕೆಯಾಗುತ್ತಿರುವ ಈ ಸಾಂಪ್ರದಾಯಿಕ ಮನೆಮದ್ದು ಶೀತದ ಲಕ್ಷಣಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ. ಆದರೆ ಅಜವಾನದ ಎಣ್ಣೆ ನಿಜಕ್ಕೂ ಶೀತಕ್ಕೆ ತಕ್ಷಣದ ಪರಿಹಾರ ನೀಡಬಲ್ಲದೇ ಎಂಬ ಪ್ರಶ್ನೆಗೆ ವಿಜ್ಞಾನ ಮತ್ತು ಆಯುರ್ವೇದ ವಿಭಿನ್ನವಾದ ಉತ್ತರಗಳನ್ನು ನೀಡುತ್ತವೆ.
ಅಜವಾನದಲ್ಲಿರುವ ಶಕ್ತಿ ಏನು?
ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೆಚ್ಚಾಗಿ ಬೆಳೆಯುವ ಓಮಕಾಳಿನಿಂದ ತಯಾರಿಸಲಾಗುವ ಈ ಎಣ್ಣೆಯಲ್ಲಿ ‘ಥೈಮೋಲ್’ ಎಂಬ ಪ್ರಬಲ ಸಂಯುಕ್ತವಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಗಂಟಲು ನೋವು ಮತ್ತು ಉಸಿರಾಟದ ಕಿರಿಕಿರಿಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಆದರೆ ಇದು ಆಧುನಿಕ ಔಷಧಗಳಂತೆ ವೇಗವಾಗಿ ಕೆಲಸ ಮಾಡುವುದಿಲ್ಲ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ಕೇವಲ ರೋಗದ ಲಕ್ಷಣಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ ದೇಹಕ್ಕೆ ಆರಾಮ ನೀಡುವ ಪೋಷಕ ಮದ್ದಷ್ಟೇ ಆಗಿದೆ.
ಉಪಶಮನ ನೀಡುವ ವಿಧಾನಗಳು
ಶೀತವಾದಾಗ ದೇಹದ ಜೀರ್ಣಕ್ರಿಯೆ ಮಂದಗತಿಯಲ್ಲಿರುತ್ತದೆ. ಅಂತಹ ಸಮಯದಲ್ಲಿ ಅಜವಾನದ ಬಳಕೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಆಯುರ್ವೇದದ ಪ್ರಕಾರ ಅಜವಾನವು ಉಷ್ಣ ಪ್ರವೃತ್ತಿಯನ್ನು ಹೊಂದಿರುವುದರಿಂದ, ಇದನ್ನು ಬಿಸಿ ನೀರಿನಲ್ಲಿ ಅಥವಾ ಕಷಾಯದ ರೂಪದಲ್ಲಿ ಬಳಸಿದಾಗ ಎದೆ ಮತ್ತು ಗಂಟಲಿನ ಭಾಗದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಮೂಗು ಕಟ್ಟುವಿಕೆಯ ಸಮಸ್ಯೆ ಇದ್ದರೆ ಅಜವಾನದ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಆವಿ ತಗೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದು ಉಸಿರಾಟದ ನಾಳದಲ್ಲಿರುವ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.
ಬಳಸುವ ಮುನ್ನ ಎಚ್ಚರಿಕೆ ಇರಲಿ
ಅಜವಾನದ ಎಣ್ಣೆಯು ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ನೇರವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದು ಹೊಟ್ಟೆಯಲ್ಲಿ ಕಿರಿಕಿರಿ ಅಥವಾ ಉರಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಸಾಂಪ್ರದಾಯಿಕವಾಗಿ ಓಮಕಾಳುಗಳನ್ನು ಬಳಸುವುದು ಸುರಕ್ಷಿತವಾಗಿದ್ದರೂ, ಎಣ್ಣೆಯ ರೂಪದಲ್ಲಿ ಬಳಸುವಾಗ ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಉತ್ತಮ. ಶೀತದ ಲಕ್ಷಣಗಳು ತೀವ್ರವಾಗಿದ್ದರೆ ಕೇವಲ ಮನೆಮದ್ದನ್ನು ಅವಲಂಬಿಸದೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

