ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿಯ ಭೀಕರ ವಿಮಾನ ಅಪಘಾತದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ, ಅಲ್ಲದೆ ಈ ಘಟನೆಯಲ್ಲಿ ಸಂಚು ನಡೆದಿರುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಅವರು ತಮ್ಮ ತವರು ಕ್ಷೇತ್ರವಾದ ಬಾರಾಮತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ .
ಈ ಘಟನೆಯ ಹಿಂದೆ ಯಾವುದೋ ವ್ಯವಸ್ಥಿತ ಸಂಚು ಅಥವಾ ರಾಜಕೀಯ ಪ್ರೇರಿತ ‘ಫೌಲ್ ಪ್ಲೇ’ (Foul Play) ಇರಬಹುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ.. ಕೇಂದ್ರ ತನಿಖಾ ಸಂಸ್ಥೆಗಳ ಬದಲಿಗೆ, ನೇರವಾಗಿ ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (SIT) ತನಿಖೆಯಾಗಬೇಕು ಎಂಬುದು ಅವರ ಆಗ್ರಹವಾಗಿದೆ.
ಮಮತಾ ಬ್ಯಾನರ್ಜಿ ಹೇಳಿದ್ದೇನು..?
ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಅಜಿತ್ ಪವಾರ್ ಅವರ ಸಾವಿನ ಸುದ್ದಿಯಿಂದ ತಾವು “ಸ್ತಬ್ಧಗೊಂಡಿರುವುದಾಗಿ” ತಿಳಿಸಿದರು ಮತ್ತು ಈ ಘಟನೆಯನ್ನು ರಾಷ್ಟ್ರಕ್ಕೆ ಆದ ದೊಡ್ಡ ನಷ್ಟ ಎಂದು ಬಣ್ಣಿಸಿದರು. ರಾಜಕೀಯ ನಾಯಕರಿಗೂ ಸಹ “ಯಾವುದೇ ಸುರಕ್ಷತೆ ಮತ್ತು ಭದ್ರತೆ ಇಲ್ಲ” ಎಂದು ಅವರು ಪ್ರತಿಪಾದಿಸಿದರು. ಅಲ್ಲದೆ, ಪವಾರ್ ಅವರು ಬಿಜೆಪಿಯನ್ನು ತೊರೆಯುವ ಆಲೋಚನೆಯಲ್ಲಿದ್ದರು ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹೇಳಿಕೆಗಳನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
“ಇಂದು ಸಂಭವಿಸಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ,” ಎಂದು ಹೇಳಿದ ಅವರು, ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆ ಮಾತ್ರ ವಿಶ್ವಾಸಾರ್ಹವಾಗಿರುತ್ತದೆ ಎಂದು ತಿಳಿಸಿದರು. ತನಿಖಾ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡಿವೆ ಎಂದು ಆರೋಪಿಸಿದ ಬ್ಯಾನರ್ಜಿ, “ನಮಗೆ ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಇದೆ, ಬೇರೆ ಯಾವುದೇ ಸಂಸ್ಥೆಯ ಮೇಲಲ್ಲ” ಎಂದರು. ಈ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಇನ್ನು ಅಧಿಕೃತ ತನಿಖಾ ವರದಿಗಳನ್ನು ನೀಡಬೇಕಿದೆ.
ಭೀಕರ ವಿಮಾನ ದುರಂತ
ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ (VSR Ventures Pvt. Ltd.) ನಿರ್ವಹಿಸುತ್ತಿದ್ದ ಮತ್ತು VT-SSK ಎಂದು ನೋಂದಾಯಿಸಲ್ಪಟ್ಟ 16 ವರ್ಷ ಹಳೆಯ ‘ಬಾಂಬಾರ್ಡಿಯರ್ ಲಿಯರ್ಜೆಟ್ 45’ (Bombardier Learjet 45) ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸಂಪೂರ್ಣವಾಗಿ ನಾಶವಾಗಿದೆ. ಘಟನಾ ಸ್ಥಳದಲ್ಲಿ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ದಟ್ಟವಾದ ಹೊಗೆ ಆವರಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಇಳಿಯುವ (Landing) ಸಮಯದಲ್ಲಿ ತೊಂದರೆಗಳನ್ನು ಎದುರಿಸಿದೆ ಎಂದು ತಿಳಿದುಬಂದಿದೆ. ಘಟನೆಯ ನಿಖರವಾದ ಸರಣಿಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಮತ್ತು ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ. ವಿಐಪಿ ಹಾಗೂ ಕಾರ್ಪೊರೇಟ್ ಪ್ರಯಾಣಕ್ಕೆ ಸಾಮಾನ್ಯವಾಗಿ ಬಳಸಲಾಗುವ ಮತ್ತು ಬಾರಾಮತಿಯಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ಸೂಕ್ತವಾದ ಈ ಅವಳಿ ಇಂಜಿನ್ನ ಲಘು ಜೆಟ್ ವಿಮಾನವು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತ್ತು.

