ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತು ಕಳೆದ ಕೆಲವು ಸಮಯದಿಂದ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಯುವ ಆಟಗಾರರತ್ತ ಗಮನ ಹರಿಸಲು ಚಿಂತಿಸುತ್ತಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ವಿಷಯದಲ್ಲಿ ಬಿಸಿಸಿಐ ರೋಹಿತ್ ಶರ್ಮಾ ಅವರೊಂದಿಗೆ ನೇರ ಹಾಗೂ ಸ್ಪಷ್ಟ ಮಾತುಕತೆ ನಡೆಸಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ತಮಗೆ ಇಂದಿಗೂ ಪಂದ್ಯ ಗೆಲ್ಲಿಸುವ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದ್ದರು. 2025ರ ಅಕ್ಟೋಬರ್ ನಂತರ ಆಡಿದ 15 ಏಕದಿನ ಪಂದ್ಯಗಳಲ್ಲಿ ಅವರು ಎರಡು ಭಾರಿ ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ಪೂರೈಸಿದ್ದಾರೆ. ಆದಾಗ್ಯೂ ಅವರ ವಯಸ್ಸು ಮತ್ತು ಫಿಟ್ನೆಸ್ ಕುರಿತು ಪದೇ ಪದೇ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಅವರಂತಹ ಅನುಭವಿ ಆಟಗಾರನಿಗೆ ಪ್ರತಿ ಸರಣಿಯ ನಂತರವೂ ಅವರ ಭವಿಷ್ಯದ ಬಗ್ಗೆ ಅನುಮಾನ ಮೂಡಿಸುವುದು ಸರಿಯಲ್ಲ ಎಂದಿದ್ದಾರೆ. 2027ರ ವಿಶ್ವಕಪ್ ಟೂರ್ನಿಯಲ್ಲಿ ಅವರು ಆಡಲಿದ್ದಾರೆ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಬೇಕು. ಭಾರತ ತಂಡಕ್ಕೆ ಅವರ ಸುದೀರ್ಘ ಅನುಭವದ ಅಗತ್ಯವಿದೆ. ಯಾವುದೇ ಆಟಗಾರನಿಗೆ ಮಾನಸಿಕ ನೆಮ್ಮದಿ ಮತ್ತು ಸ್ಪಷ್ಟತೆ ಇದ್ದಾಗ ಮಾತ್ರ ನೈಜ ಲಯ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ರೋಹಿತ್ ಶರ್ಮಾ ಆಯ್ಕೆಯ ವಿಚಾರದಲ್ಲಿ ಆಯ್ಕೆ ಸಮಿತಿ ಹಾಗೂ ನಾಯಕತ್ವದ ನಡುವೆ ಯಾವುದೇ ಗೊಂದಲ ಇರಬಾರದು ಎಂದು ರಹಾನೆ ಹೇಳಿದ್ದಾರೆ.

