ಶ್ರೀರಂಗಪಟ್ಟಣ: ಮಹಿಳಾ ಪಿಎಸ್ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಶ್ರೀರಂಗಪಟ್ಟಣದ ನ್ಯಾಯಾಲಯ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಐಶ್ವರ್ಯಾ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯ ಆರತಿ ಉಕ್ಕಡಗಾತ್ರಿ ದೇವಸ್ಥಾನದಲ್ಲಿ ಐಶ್ವರ್ಯ, ಕರ್ತವ್ಯನಿರತ ಮಹಿಳಾ ಪಿಎಸ್ಐ ಸವಿತಾ ಅವರಿಗೆ ಕಪಾಳಕ್ಕೆ ಹೊಡೆದ ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಅಧಿಕೃತ ಪ್ರಕರಣ ದಾಖಲಾಗಿತ್ತು. ಆದರೆ, ಐಶ್ವರ್ಯರನ್ನು ಪೊಲೀಸರು ಬಂಧಿಸಿರಲಿಲ್ಲ. ಕೇವಲ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು.
ಈ ನಡುವೆ ಬಂಧನದ ಭೀತಿಯಲ್ಲಿದ್ದ ಐಶ್ವರ್ಯ, ಕಾನೂನು ರಕ್ಷಣೆ ಕೋರಿ ಶ್ರೀರಂಗಪಟ್ಟಣದ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಐಶ್ವರ್ಯ ಅವರಿಗೆ ಬೇಲ್ ನಿರಾಕರಿಸಿದೆ. ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲಿನ ಹಲ್ಲೆಯ ಗಂಭೀರತೆಯನ್ನು ಪರಿಗಣಿಸಿ ಐಶ್ವರ್ಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಪುತ್ರಿ, ಪೊಲೀಸ್ ಅಧಿಕಾರಿಯ ಪತ್ನಿ ಐಶ್ವರ್ಯ ಇತ್ತೀಚೆಗೆ ಭೀಮನ ಅಮವಾಸ್ಯೆ ದಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿಯ ದರ್ಶನಕ್ಕೆ ಮಕ್ಕಳ ಜೊತೆ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದರಿಂದ ದೇವಿಯ ದರ್ಶನ ಪಡೆಯಲು ಪರದಾಟ ನಡೆಸಿದ್ದರು. ದೇವಾಲಯ ಆವರಣಕ್ಕೆ ಪ್ರವೇಶ ಮಾಡಿದ್ದ ಅವರು, ತನ್ನ ಜೊತೆ ಇಬ್ಬರು ಮಕ್ಕಳಿದ್ದಾರೆ. ತನ್ನನ್ನ ನೇರವಾಗಿ ಗರ್ಭಗುಡಿಗೆ ಬಿಡುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಸವಿತಾ ಅವರನ್ನ ಕೇಳಿದ್ದರು. ಆದರೆ ಐಶ್ವರ್ಯ ಮನವಿಗೆ ಪಿಎಸ್ಐ ಸ್ಪಂದಿಸಲಿಲ್ಲವಂತೆ. ಇದೇ ವೇಳೆ ಮಫ್ತಿಯಲ್ಲಿ ಕರ್ತವ್ಯದಲ್ಲಿ ಇನ್ಸ್‌ಪೆಕ್ಟರ್ ಗರ್ಭಗುಡಿಗೆ ಪ್ರವೇಶ ಮಾಡಿದನ್ನ ಐಶ್ವರ್ಯ ಪ್ರಶ್ನಿಸಿದ್ದರು. ಅವರು ಇನ್ಸ್ ಪೆಕ್ಟರ್ ಎಂದು ಸವಿತಾ ವಿವರಿಸಿದರೂ ಕೋಪಗೊಂಡಿದ್ದ ಐಶ್ವರ್ಯ, ಸವಿತಾರಿಗೆ ಕಪಾಳಮೋಕ್ಷ ಮಾಡಿದ್ದರು.
ಈಗ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಐಶ್ವರ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ಪೊಲೀಸರು ಐಶ್ವರ್ಯ ಅವರನ್ನು ಬಂಧಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

