HomeKarnatakaವೈಮಾನಿಕ ದಾಳಿ-ತುರ್ತು ಸಂದರ್ಭದ ನಿರ್ವಹಣೆ: ಗಮನಸೆಳೆದ ಮಾಕ್ ಡ್ರಿಲ್ ಕಾರ್ಯಾಚರಣೆ

ವೈಮಾನಿಕ ದಾಳಿ-ತುರ್ತು ಸಂದರ್ಭದ ನಿರ್ವಹಣೆ: ಗಮನಸೆಳೆದ ಮಾಕ್ ಡ್ರಿಲ್ ಕಾರ್ಯಾಚರಣೆ

ಶಿವಮೊಗ್ಗ: ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಶುಕ್ರವಾರ ಸಂಜೆ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಮಾಕ್ ಡ್ರಿಲ್'(ಅಣಕು ಪ್ರದರ್ಶನ) ಯಶಸ್ವಿಯಾಗಿ ಜರುಗಿತು.

2026 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆಯನ್ವಯ ಜಿಲ್ಲಾ ಮಟ್ಟದಲ್ಲಿ ಈ ಪ್ರದರ್ಶನವನ್ನು‌ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಮಾಕ್ ಡ್ರಿಲ್ ಕಾರ್ಯಾಚರಣೆ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ನಿಮಿಷಗಳ ಸೈರನ್ ಮೊಳಗಿಸುವಿಕೆ: ಬಹು ಮಹಡಿ‌ಕಟ್ಟಡ ಮತ್ತು ಶಾಲಾ ಸಮುಚ್ಷಯಕ್ಕೆ ವೈಮಾನಿಕ  ಅಣಕು ಪ್ರದರ್ಶನದ ಆರಂಭದಲ್ಲಿ ಶತ್ರುಗಳ ವಾಯುದಾಳಿಯ ಮುನ್ಸೂಚನೆ ನೀಡುವಂತೆ ‘ಕೋಡ್ ರೆಡ್’ ಎಚ್ಚರಿಕೆಯ 2 ನಿಮಿಷಗಳ ಸೈರನ್ ಮೊಳಗಿಸಲಾಯಿತು. ತಕ್ಷಣವೇ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ಆರಂಭವಾಯಿತು.

ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಥಮ ಚಿಕಿತ್ಸೆ:

ದಾಳಿಯಿಂದ ಕಟ್ಟಡಗಳು ಧರಾಶಾಯಿಯಾದಾಗ ಸಾರ್ವಜನಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ಅವಶೇಷಗಳಡಿ ಸಿಲುಕಿದವರನ್ನು ಹುಡುಕಿ ರಕ್ಷಿಸುವುದು ಹಾಗೂ ಗಾಯಾಳುಗಳಿಗೆ ತಕ್ಷಣವೇ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ, ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವುದು, ನಂತರ ಸ್ಥಳ ಪರಿಶೀಲನೆ ಕೈಗೊಳ್ಳುವ, ಐಇಡಿ ಲಭ್ಯವಾಗಿದ್ದು, ಬಾಂಬ್ ಕಿಲ್ಲರ್ ನ್ನು‌ ತೆಗೆದು ಸೇಫ್ ಡಿಸ್ ಪೋಸಬಲ್ ಏರಿಯಾ ಗೆ ತರಲಾದ ಹಾಗೂ ಬಿಡಿಎಸ್ ಅಧಿಕಾರಿ‌ಗಳು ‌ಮತ್ತು ಸೊಕೊ‌ ತಂಡ ಕಾರ್ಯಾಚರಣೆ ಕುರಿತು ಉನ್ನತ ಅಧಿಕಾರಿಗಳಿಗೆ ವರದಿ‌ ನೀಡಿದ ಹಾಗೂ ಉನ್ನತ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಆದೇಶಿದ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಬಸ್ ಹೈಜಾಕ್:

ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳು(ನಟಿಸಿದ ಸಿಬ್ಬಂದಿ) ನಿಯಂತ್ರಣಕ್ಕೆ ಪಡೆದು, ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂಬ ತುರ್ತು ಸಂದೇಶ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತು. ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಕಮಾಂಡೋ ಮಾದರಿಯ ಶಸ್ತ್ರಸಜ್ಜಿತ ಪಡೆ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿತು.

ಇಡೀ ಬಸ್ ನಿಲ್ದಾಣದ ಆವರಣವನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ, ತಕ್ಷಣವೇ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಿದರು. ದುಷ್ಕರ್ಮಿಗಳೊಂದಿಗೆ ಸಂಧಾನ ನಡೆಸುವ ನಾಟಕೀಯ ಸನ್ನಿವೇಶದ ನಡುವೆಯೇ, ಮತ್ತೊಂದೆಡೆ ಅತ್ಯಂತ ಜಾಣ್ಮೆಯಿಂದ ಬಸ್ಸಿನ ಹಿಂಬಾಗಿಲು ಮತ್ತು ಕಿಟಕಿಗಳ ಮೂಲಕ ಒಳನುಗ್ಗಿದ ವಿಶೇಷ ಕಮಾಂಡೋ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಕೇವಲ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳನ್ನು ಸೆರೆ ಹಿಡಿದು, ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಅತ್ಯಂತ ಯಶಸ್ವಿಯಾಗಿ ರಕ್ಷಿಸಲಾಯಿತು. ಕಾರ್ಯಾಚರಣೆ ನಂತರ 2 ನಿಮಿಷ ಸೈರನ್ ಮೊಳಗಿಸಲಾಯಿತು.‌

ವಿವಿಧ ಇಲಾಖೆಗಳ ಯಶಸ್ವಿ ಸಮನ್ವಯ

ಈ ಬೃಹತ್ ಅಣಕು ಪ್ರದರ್ಶನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ನಾಗರಿಕ ರಕ್ಷಣಾ ಸ್ವಯಂಸೇವಕರು, ಆರೋಗ್ಯ ಇಲಾಖೆ, ಎನ್‌ಸಿಸಿ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಹಾಗೂ ಕೆಎಸ್ಆರ್‌ಟಿಸಿ ಸಿಬ್ಬಂದಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಿದ್ಧತೆಯನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ.‌ ಅವರ ನೇತೃತ್ವದಲ್ಲಿ ಇಲಾಖೆಗಳ ನಡುವಿನ ಸಮನ್ವಯತೆಯನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಯಿತು.

ಸಾರ್ವಜನಿಕರಿಗೆ ಧೈರ್ಯ ತುಂಬಿದ ಅಧಿಕಾರಿಗಳು

“ಇದು ಕೇವಲ ದೇಶದ ಭದ್ರತಾ ಮುನ್ನೆಚ್ಚರಿಕೆಯ ತರಬೇತಿ ಪ್ರಕ್ರಿಯೆಯಾಗಿದೆ. ಇಂತಹ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರು ಭಯಭೀತರಾಗದೆ, ಧೈರ್ಯದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಮತ್ತು ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಅಣಕು ಪ್ರದರ್ಶನ ಆಯೋಜಿಸಲಾಗಿದೆ” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು‌ ಹಾಜರಿದ್ದರು.

ಅಣಕು ಪ್ರದರ್ಶನದ ನಂತರ ಜಿಲ್ಲಾಧಿಕಾರಿ ಮಾತನಾಡಿ, ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ‌ ಮಾಕ್ ಡ್ರಿಲ್ ಉದ್ದೇಶವಾಗಿದೆ. ಎಲ್ಲ ನೌಕರರು ವಾಸ್ತವದಂತೆ ಪ್ರದರ್ಶಿಸಿದ್ದೀರಿ. ಇಲಾಖೆಗಳ ಸಮನ್ವಯತೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಭಾಗವಹಿಸಿದ ಎಲ್ಲರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ನಿಖಿಲ್ ಬಿ.‌‌ ಮಾತನಾಡಿ, ತುರ್ತು ಪರಿಸ್ಥಿತಿ, ವಿಪತ್ತು ಎದುರಾದಾಗ ಇಲಾಖೆಗಳ ಸನ್ನದ್ದತೆ ಮತ್ತು ಸಾರ್ವಜನಿಕರ ಸಹಕಾರ ಸಮನ್ವಯತೆ ಅಗತ್ಯವಾಗಿದ್ದು, ಅತ್ಯಂತ ವಾಸ್ತವವಾಗಿ ಅಣಕು ಪ್ರದರ್ಶನ ಮಾಡಲಾಗಿದ್ದು, ಪ್ರದರ್ಶನದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್ಸಿಸಿ ಸೇರಿದಂತೆ 300 ಜನರು ಪಾಲ್ಗೊಂಡಿದ್ದು ಸಹಕರಿಸಿದ ಎಲ್ಲ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರಿಗೆ ವಂದನೆ ತಿಳಿಸಿದರು. ಗೃಹ ರಕ್ಷಕ ದಳದ ಕಮಾಂಡೆಂಟ್ ಚೇತನ್ ಅಣಕು ಪ್ರದರ್ಶನ ಯಶಸ್ವಿಗೊಳಿಸಿದ ಸರ್ವರಿಗೆ ವಂದಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular