HomeLatest Newsನಾಳೆ ಸಂಜೆ ವಾಯುದಾಳಿ ಮುನ್ನೆಚ್ಚರಿಕೆ ಅಣಕು ಪ್ರದರ್ಶನ : ಸಾರ್ವಜನಿಕರಲ್ಲಿ ಆತಂಕ ಬೇಡ

ನಾಳೆ ಸಂಜೆ ವಾಯುದಾಳಿ ಮುನ್ನೆಚ್ಚರಿಕೆ ಅಣಕು ಪ್ರದರ್ಶನ : ಸಾರ್ವಜನಿಕರಲ್ಲಿ ಆತಂಕ ಬೇಡ

ಶಿವಮೊಗ್ಗ : ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಜೂ.5 ರ ಸಂಜೆ 5 ಗಂಟೆಗೆ ‘ಮಾಕ್ ಡ್ರಿಲ್’ (ಅಣಕು ಪ್ರದರ್ಶನ) ಆಯೋಜಿಸಲಾಗಿದೆ. ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಕುರಿತು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನದ ಪೂರ್ವಭಾವಿ ಸಿದ್ದತೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, 2026 ನೇ ಸಾಲಿನಲ್ಲಿ ರಾಷ್ಟçಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದ್ದು ಈ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿಯೂ ಶುಕ್ರವಾರ ಸಂಜೆ 5 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್ ಏರ್ಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕಸ್ಮಿಕ ವಾಯುದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಹೇಗೆ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಹೇಗೆ ಒದಗಿಸಬೇಕು ಮತ್ತು ವಿವಿಧ ಇಲಾಖೆಗಳು ಹೇಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ.ಈ ಅಣಕು ಪ್ರದರ್ಶನವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕದಳ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ನಾಗರೀಕ ರಕ್ಷಣಾ ಸ್ವಯಂ ಸೇವಕರು, ಗೃಹರಕ್ಷಕರು, ಎನ್‌ಸಿಸಿ ಹಾಗೂ ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಯಲಿದೆ.

ಸೈರನ್ ಮೊಳಗಿಸುವಿಕೆ : ಸಾರ್ವಜನಿಕರು ಗಾಬರಿಯಾಗಬೇಡಿ

ವೈಮಾನಿಕ ದಾಳಿಯ ಮುನ್ಸೂಚನೆ ನೀಡುವ 2 ನಿಮಿಷಗಳ ಸೈರನ್ ಮೊಳಗಿಸಲಾಗುವುದು. ಸೈರನ್ ಸದ್ದು ಕೇಳಿದ ತಕ್ಷಣ ನಾಗರಿಕರು ಗಾಬರಿಯಾಗಬಾರದು.ಇದು ಕೇವಲ ತರಬೇತಿಯ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಮ್ಮಿಕೊಳ್ಳಲಾಗಿದೆ.ತಾಲೀಮಿನ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಹಾಗೂ ಆಂಬ್ಯುಲೆನ್ಸ್ಗಳ ಸಂಚಾರ ಇರಲಿದೆ, ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವುದು, ಹುಡುಕಾಟ ಮತ್ತು ರಕ್ಷಣೆ ಹಾಗೂ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸಾಗಿಸುವ ಪ್ರದರ್ಶನವಿರುತ್ತದೆ ಎಂದರು.

ನಗರದಲ್ಲಿ ನಡೆಯಲಿರುವ ಈ ತಾಲೀಮು ಕೇವಲ ನಾಗರಿಕರ ಸುರಕ್ಷತೆ ಮತ್ತು ಜಾಗೃತಿಗಾಗಿ ಹಮ್ಮಿಕೊಂಡಿರುವ ಸಾಂಪ್ರದಾಯಿಕ ಸಿದ್ಧತೆಯಾಗಿದ್ದು ಸಾರ್ವಜನಿಕರು ಸಹ ವೀಕ್ಷಿಸಲು ಭಾಗವಹಿಸಬಹುದು ಎಂದು ತಿಳಿಸಿದರು.ಎಎಸ್‌ಪಿ ಕಾರಿಯಪ್ಪ ಮಾತನಾಡಿ, ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಸಂಬಂಧಿಸಿದವರು ನಿರ್ವಹಿಸಬೇಕು. ಅಣಕು ಪ್ರದರ್ಶನ ವೇಳೆ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಅಣಕು ಪ್ರದರ್ಶನದಲ್ಲಿ ವೈಮಾನಿಕ ದಾಳಿ, ದಾಳಿಯಿಂದ ಹಾನಿಗೊಳಗಾದ ಗುಡಿಸಲು, ರಕ್ಷಣೆಗೆ ಅಗತ್ಯವಾದ ಅಗ್ನಿ ಶಾಮಕ ದಳ, ರಕ್ಷಣಾ ಪಡೆ, ಆಂಬುಲೆನ್ಸ್ , ಆಸ್ಪತ್ರೆ, ಕೇಂದ್ರ ಮಾಹಿತಿ ಕೇಂದ್ರ ಹೀಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಮತ್ತು ಡ್ರೋನ್ ವಿಡಿಯೋಕರಣ ಸಹ ಮಾಡಲಾಗುವುದು. ಇದು ಕೇವಲ ರಕ್ಷಣಾ ಸಿದ್ದತೆಯ ಪರಿಶೀಲನೆಗಾಗಿ ನಡೆಸುವ ಕೃತಕ ಅಣಕು ಪ್ರದರ್ಶನವಾದ್ದರಿಂದ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡವಾಗಿದ್ದು ಸಾರ್ವಜನಿಕರು ವೀಕ್ಷಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಡಿಹೆಚ್‌ಓ ಡಾ.ನಟರಾಜ್ ಕೆ ಎಸ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಗೀತಾ, ಡಿಎಸ್‌ಪಿ ಡಿಆರ್ ದಿಲೀಪ್ ಕುಮಾರ್, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪಾಲಿಕೆ, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular