ನವದೆಹಲಿ: ಏರ್ ಇಂಡಿಯಾ ವಿಮಾನವೊಂದು ಆಗಸದಲ್ಲಿ ಬಿರಿಗಾಳಿಗೆ ಸಿಲುಕಿ, 300 ಅಡಿ ಕೆಳಕ್ಕೆ ಕುಸಿದು ಪಲ್ಟಿಯಾದ ಘಟನೆ ನಡೆದಿದ್ದು, ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ 14 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನವು ಇದ್ದಕ್ಕಿದ್ದಂತೆ ಸುಮಾರು 300 ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಒಳಗಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸೀಟ್ ಬೆಲ್ಟ್ ಧರಿಸದಿದ್ದ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ವಿಮಾನದ ಸಿಬ್ಬಂದಿ ವಿಮಾನದ ಸೀಲಿಂಗ್ಗೆ ಬಡಿದು ಗಾಯಗೊಂಡಿದ್ದಾರೆ.
ವಿಮಾನದಲ್ಲಿ ಉಂಟಾದ ಆತಂಕದ ನಡುವೆಯೂ ಏರ್ ಇಂಡಿಯಾ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ತುರ್ತು ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದೆ. ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನದ ಒಳಗಿನ ಸೀಲಿಂಗ್ ಪ್ಯಾನೆಲ್ಗಳು ಜಖಂಗೊಂಡಿವೆ. ಮಾಹಿತಿಯ ಪ್ರಕಾರ, ಹಾರಾಟದ ಸಮಯದಲ್ಲಿ ವಿಮಾನವು ತಕ್ಷಣವೇ ಸುಮಾರು 300 ಅಡಿ ಕೆಳಕ್ಕೆ ಧುಮುಕಿದೆ ಎಂದು ಪೈಲಟ್ ತಿಳಿಸಿದ್ದಾರೆ. ಆಗಸದಲ್ಲೇ ವಿಮಾನ ಪಲ್ಟಿ ಹೊಡೆಯುತ್ತಾ ಕುಸಿದ ಕಾರಣದಿಂದ ಶೇ. 80ರಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟು 14 ಜನರಿಗೆ ಹೆಚ್ಚಿನ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ವಿಮಾನದಲ್ಲಿನ ಪ್ರಯಾಣಿಕರು ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
ವಿಮಾನವು ಇನ್ನೂ ಆಗಸದಲ್ಲಿದ್ದಾಗಲೇ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು, ಹೀಗಾಗಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ವೈದ್ಯಕೀಯ ತಂಡಗಳನ್ನು ಸಿದ್ಧವಾಗಿಡಲಾಗಿತ್ತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಕೆಳಗಿಳಿದರು. ಗಾಯಗೊಂಡವರನ್ನು ತಕ್ಷಣವೇ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಈ ಘಟನೆಯ ಕುರಿತು ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, “ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI2379 ವಿಮಾನವು ಹಾರಾಟದ ಮಧ್ಯೆ ಹಠಾತ್ ಗಾಳಿಗೆ ಸಿಲುಕಿ ಕೆಲ ಕ್ಷಣಗಳ ಕಾಲ ಆಗಸದಲ್ಲೇ ಗಿರಕಿಹೊಡೆದಿದೆ ಎಂಬುವುದನ್ನು ದೃಢಪಡಿಸುತ್ತೇವೆ” ಎಂದು ಹೇಳಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ವಹಿಸಿ ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗಾಗಿ ವಿಮಾನ ನಿಲ್ದಾಣದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದ್ದು, ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದೆ.

