ಬೆಂಗಳೂರು : 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಬಯಸುವ ಪೋಷಕರಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಜೂನ್ 1ಕ್ಕೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಈ ಬಾರಿಯೂ ವಿಶೇಷ ವಿನಾಯಿತಿ ನೀಡಲಾಗಿದೆ.
ವಯೋಮಿತಿ ಸಡಿಲಿಕೆ : ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 20ರ ಅನ್ವಯ, ಶೈಕ್ಷಣಿಕ ವರ್ಷದ ಪ್ರಾರಂಭದ ದಿನಾಂಕದಿಂದ (ಜೂನ್ 1) ಗರಿಷ್ಠ 60 ದಿನಗಳ (ಎರಡುತಿಂಗಳು) ಸಡಿಲಿಕೆಯನ್ನು ನೀಡಲಾಗಿದೆ.
ಯಾರಿಗೆ ಅನ್ವಯ?: ಯಾವ ಮಕ್ಕಳು ಆಗಸ್ಟ್ 1ರೊಳಗೆ 6 ವರ್ಷ ಪೂರೈಸುತ್ತಾರೋ ಅಂತಹ ಮಕ್ಕಳನ್ನು 2026-27ನೇ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಉದ್ದೇಶ: ಜೂನ್ 1ರ ನಂತರ ಹುಟ್ಟಿದ ಕಾರಣಕ್ಕೆ ಒಂದು ವರ್ಷ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಪೋಷಕರ ಮನವಿಯನ್ನು ಪುರಸ್ಕರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸರ್ಕಾರದ ಆದೇಶದಲ್ಲಿ ಏನಿದೆ..?
ಸರ್ಕಾರವು ಈ ಹಿಂದೆ 2025-26ನೇ ಸಾಲಿನಿಂದಲೇ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿತ್ತು. ಆದರೆ, ಇದರಿಂದ ಅನೇಕ ಮಕ್ಕಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ತಜ್ಞರ ಸಮಿತಿ ಮತ್ತು ಶಿಕ್ಷಣ ನೀತಿ ಆಯೋಗದ ಸಲಹೆಯಂತೆ ಈ ಸಡಿಲಿಕೆ ನೀಡಲಾಗಿದೆ.ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು SATS (Student Achievement Tracking System) ತಂತ್ರಾಂಶದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ವಯಸ್ಸಿನ ಲೆಕ್ಕಾಚಾರ: ಒಂದು ವೇಳೆ ಮಗುವಿನ ಜನ್ಮದಿನವು ಜೂನ್ 1 ರಿಂದ 60 ದಿನಗಳ ಒಳಗಿದ್ದರೆ (ಅಂದರೆ ಜುಲೈ ಅಂತ್ಯದವರೆಗೆ), ಅಂತಹ ಮಗುವಿಗೆ ಜೂನ್ 1ಕ್ಕೇ 6 ವರ್ಷ ತುಂಬಿದೆ ಎಂದು ಪರಿಗಣಿಸಿ ದಾಖಲಾತಿ ಮಾಡಿಕೊಳ್ಳಬಹುದು. ನೀವು ನಿಮ್ಮ ಮಗುವನ್ನು 1ನೇ ತರಗತಿಗೆ ಸೇರಿಸಬೇಕಿದ್ದು, ಮಗುವಿಗೆ ಜೂನ್ 1ಕ್ಕೆ 6 ವರ್ಷ ತುಂಬಲು ಕೇವಲ ಎರಡು ತಿಂಗಳ ವ್ಯತ್ಯಾಸವಿದ್ದರೆ (ಆಗಸ್ಟ್ 1ರ ಮೊದಲು ಹುಟ್ಟಿದ್ದರೆ), ಈಗ ಯಾವುದೇ ಅಡೆತಡೆಯಿಲ್ಲದೆ ದಾಖಲಾತಿ ಮಾಡಬಹುದು.




