ಬೆಂಗಳೂರು : ಬೆಂಗಳೂರು ನಗರದಲ್ಲಿ ಪಾಸ್ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ಪೋರ್ಟ್ ಪರಿಶೀಲನೆ ನಡೆಸುವ ಪ್ರತಿಯೊಬ್ಬ ಅಧಿಕಾರಿಯು ಅಥವಾ ಸಿಬ್ಬಂದಿಯು ಪರಿಶೀಲನೆಯ ಆರಂಭದಿಂದ ಅಂತ್ಯದವರೆಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾ (Body Camera) ಧರಿಸಿರಬೇಕು.
ಠಾಣೆಗೆ ಕರೆಯಿಸುವಂತಿಲ್ಲ: ಪಾಸ್ಪೋರ್ಟ್ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕರೆಯಿಸುವಂತಿಲ್ಲ.
ಪೂರ್ವ ಮಾಹಿತಿ ನೀಡುವುದು: ಅಧಿಕಾರಿಯು ಅರ್ಜಿದಾರರ ಮನೆಗೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್ಎಮ್ಎಸ್ (SMS) ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಬೇಕು.
ಸ್ಥಳೀಯರ ವಿಚಾರಣೆ: ಅರ್ಜಿದಾರರು ನೀಡಿದ ವಿಳಾಸಕ್ಕೆ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸುವುದು ಕಡ್ಡಾಯ.
ಲಂಚ ಅಥವಾ ಕಿರುಕುಳಕ್ಕೆ ನಿರ್ಬಂಧ: ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ನಿರೀಕ್ಷಿಸುವಂತಿಲ್ಲ ಅಥವಾ ಲಂಚಕ್ಕಾಗಿ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ಅರ್ಜಿಯ ಬಗ್ಗೆ ‘ಪ್ರತಿಕೂಲ ವರದಿ’ (Adverse Report) ನೀಡಬೇಕಾದರೆ ಸೂಕ್ತ ಪುರಾವೆಗಳಿರಬೇಕು.
ಶಿಸ್ತು ಕ್ರಮ: ಈ ನಿಯಮಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಮಾರ್ಗಸೂಚಿಗಳು:
- ಪಾಸ್ಪೋರ್ಟ್ ಅರ್ಜಿದಾರರನ್ನು ಪೊಲೀಸ್ ಠಾಣೆಗಳಿಗೆ ಪರಿಶೀಲನೆಗಾಗಿ ಕರೆಯಿಸುವಂತಿಲ್ಲ.
- ಪಾಸ್ಪೋರ್ಟ್ ಪರಿಶೀಲನೆಗೆ ಅರ್ಜಿದಾರರು ನೀಡಿರುವ ವಿಳಾಸಕ್ಕೆ ಹೋಗುವ ಮುಂಚಿತವಾಗಿ ಅರ್ಜಿದಾರರಿಗೆ ಮಾಹಿತಿ ತಿಳಿಸುವುದು (ಕನಿಷ್ಠ 24 ಗಂಟೆಗಳ ಮುಂಚಿತವಾಗಿ SMS/ಕರೆ ಮಾಡುವ ಮೂಲಕ).
- ಪಾಸ್ಪೋರ್ಟ್ ಪರಿಶೀಲನೆ ನಡೆಸುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳು ಪ್ರಾರಂಭದಿಂದ ಕೊನೆಯವರೆಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾಗಳನ್ನು ಧರಿಸುವುದು.
- ಈ ಬಗ್ಗೆ ಎಲ್ಲಾ ವಿಭಾಗೀಯ ಉಪ ಪೊಲೀಸ್ ಆಯುಕ್ತರು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸಿ, ವಾರಕ್ಕೊಮ್ಮೆ ಪಾಲನಾ ವರದಿ ಸಲ್ಲಿಸುವುದು.
- ಪರಿಶೀಲನೆಯ ಕೆಲವು ನಿಯಮಗಳ ಪಾಲನೆಯಲ್ಲಿ ವಿನಾಯಿತಿ ಅಗತ್ಯವಿದ್ದಲ್ಲಿ, ಈ ಕಚೇರಿಗೆ ಲಿಖಿತ ಮನವಿ ಸಲ್ಲಿಸಿ ಪೂರ್ವಾನುಮತಿಯನ್ನು ಪಡೆಯುವುದು.



