ಸಿನಿಮಾ ರಂಗದಲ್ಲಿ ಅದೆಷ್ಟೋ ನಟ-ನಟಿಯರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ವೈಯಕ್ತಿಕ ಕಾರಣಗಳಿಗಾಗಿ ಚಿತ್ರೀಕರಣದ ಮಧ್ಯದಲ್ಲೇ ಸೆಟ್ ಬಿಟ್ಟು ಹೋದ ಉದಾಹರಣೆಗಳಿವೆ. ಇಂತಹದ್ದೇ ಒಂದು ಸ್ವಾರಸ್ಯಕರ ಘಟನೆ ಬಾಲಿವುಡ್ನ ಹಿರಿಯ ನಟಿ ನೀತು ಕಪೂರ್ ಅವರ ಜೀವನದಲ್ಲಿ ನಡೆದಿತ್ತು. ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ನಟನೆಯ ‘ಯಾರಾನಾ’ ಚಿತ್ರದ ಚಿತ್ರೀಕರಣದ ವೇಳೆ ನೀತು ಕಪೂರ್ ಕಣ್ಣೀರು ಹಾಕುತ್ತಾ ಅರ್ಧಕ್ಕೆ ಮುಂಬೈಗೆ ಮರಳಿದ್ದರಂತೆ.
1981ರಲ್ಲಿ ಬಿಡುಗಡೆಯಾದ ‘ಯಾರಾನಾ’ ಚಿತ್ರದ ಐಕಾನಿಕ್ ಹಾಡು ‘ಸಾರಾ ಜಮಾನಾ ಹಸೀನೋ ಕಾ ದೀವಾನಾ’ ಚಿತ್ರೀಕರಣ ಕೋಲ್ಕತ್ತಾದ ಕ್ರೀಡಾಂಗಣವೊಂದರಲ್ಲಿ ನಡೆಯುತ್ತಿತ್ತು. ಈ ವೇಳೆ ನೀತು ಕಪೂರ್ ಮತ್ತು ರಿಷಿ ಕಪೂರ್ ಅವರ ನಿಶ್ಚಿತಾರ್ಥವಾಗಿತ್ತು. ಅಂದು ಕೋಲ್ಕತ್ತಾದಲ್ಲಿ ಫೋನ್ ಸಂಪರ್ಕ ಸರಿಯಿರದ ಕಾರಣ ರಿಷಿ ಕಪೂರ್ ಅವರಿಗೆ ನೀತು ಅವರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರಿಷಿ ಕಪೂರ್ ಅಸಮಾಧಾನಗೊಂಡಿದ್ದರೆಂದು ತಿಳಿದ ನೀತು ಕಪೂರ್, ಸೆಟ್ನಲ್ಲಿ ಕಣ್ಣೀರು ಹಾಕಲು ಶುರು ಮಾಡಿದ್ದರು.
ನೀತು ಕಪೂರ್ ಅಳುತ್ತಿರುವುದನ್ನು ಗಮನಿಸಿದ ಅಮಿತಾಭ್ ಬಚ್ಚನ್, ವಿಷಯ ತಿಳಿದು ತಕ್ಷಣವೇ ಚಿತ್ರದ ನಿರ್ಮಾಪಕರಿಗೆ ಕರೆ ಮಾಡಿದ್ದರು. ನೀತು ಅವರ ವಿಮಾನದ ಟಿಕೆಟ್ ಬುಕ್ ಮಾಡಿ ಅವರನ್ನು ಮುಂಬೈಗೆ ಕಳುಹಿಸಿಕೊಡುವಂತೆ ತಿಳಿಸಿದರು. ಅಷ್ಟೇ ಅಲ್ಲದೆ, ಅವರ ಅನುಪಸ್ಥಿತಿಯಲ್ಲೇ ಹಾಡಿನ ಚಿತ್ರೀಕರಣವನ್ನು ಮ್ಯಾನೇಜ್ ಮಾಡುವುದಾಗಿ ಭರವಸೆ ನೀಡಿದರು. ನೀವು ಆ ಹಾಡನ್ನು ಗಮನಿಸಿದರೆ, ಅರ್ಧದಷ್ಟು ಹಾಡಿನಲ್ಲಿ ಮಾತ್ರ ನೀತು ಕಪೂರ್ ಕಾಣಿಸಿಕೊಳ್ಳುತ್ತಾರೆ, ನಂತರ ಅವರು ಮಾಯವಾಗುತ್ತಾರೆ.
ಅಚ್ಚರಿಯ ವಿಷಯವೆಂದರೆ, ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಈ ಸಿನಿಮಾ ಆ ವರ್ಷದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಅಂದು ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ‘ಯಾರಾನಾ’ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 7 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಗೆಳೆತನದ ಮಹತ್ವ ಸಾರುವ ಈ ಚಿತ್ರ ಇಂದಿಗೂ ಸಿನಿಪ್ರಿಯರ ನೆಚ್ಚಿನ ಚಿತ್ರಗಳ ಪಟ್ಟಿಯಲ್ಲಿದೆ.

