ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಎಂ. ಸತ್ಯವಾರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ 7 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮೃತಪಟ್ಟವರೆಲ್ಲರೂ ಅಪ್ತಾಪ್ತರು. ಈ ಘಟನೆ ಬಳಿಕ ಬೆಂಗಳೂರು ಸಂಚಾರಿ ಪೊಲೀಸರು ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವ ವಿರುದ್ಧ ವಿಶೇಷ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಅಪ್ರಾಪ್ತರು ವಾಹನ ಚಾಲನೆಯಲ್ಲಿ ತೊಡಗುವುದು ಉಲ್ಲಂಘನೆಯಾಗಿದ್ದು, ಈ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದ್ದರೂ ಸಹ ಪೋಷಕರುಗಳು ತಮ್ಮ ಮಕ್ಕಳು ವಾಹನಗಳನ್ನು ಚಲಾಯಿಸುತ್ತಿರುವುದನ್ನು ನಿಗಾವಹಿಸದೇ ಇರುವುದು ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾಗುತ್ತಿರುವ ಅಪ್ರಾಪ್ತರುಗಳ ಸಾವಿಗೆ ಪರೋಕ್ಷವಾಗಿ ಕಾರಣವಾಗುತ್ತಿರುತ್ತಾರೆ.
ಇತ್ತೀಚೆಗೆ ಬೆಂಗಳೂರಿನ ಹೊರವಲಯ ಹೊಸಕೋಟೆಯ ಬಳಿ ಸಂಭವಿಸಿದ ಅಪಘಾತದಲ್ಲಿ ಅಪ್ರಾಪ್ತರು ವಾಹನ ಚಾಲನೆಯಲ್ಲಿ ಭಾಗಿಯಾಗಿ ಮೃತಪಟ್ಟಿರುವ ಘಟನೆಯು ಇದಕ್ಕೆ ಒಂದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಹಿಂದಿನಿಂದಲೂ ಅಪ್ರಾಪ್ತ ಚಾಲನೆಯ ನಿಯಮ ಉಲ್ಲಂಘನೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರ ಸಂಚಾರ ವಿಭಾಗದಿಂದ ಅಪ್ರಾಪ್ತ ಚಾಲನೆಯ ವಿರುದ್ಧ ಕೈಗೊಂಡಿರುವ ಕ್ರಮದ ಕಿರು ಮಾಹಿತಿಯನ್ನು ಈ ಕೆಳಕಂಡಂತೆ ಒದಗಿಸಲಾಗಿದೆ.
ಐ.ಎಂ.ವಿ. ಕಾಯ್ದೆಯಡಿಯಲ್ಲಿ ದಾಖಲಿಸಿರುವ ಪ್ರಕರಣಗಳು
* 2023ರಲ್ಲಿ ಅಪ್ರಾಪ್ತ ಚಾಲನೆಯ ವಿರುದ್ಧ ದಾಖಲಿಸಿರುವ ಪ್ರಕರಣಗಳು 95
* 2024ರಲ್ಲಿ 197 ಮತ್ತು 2025ರಲ್ಲಿ 414
ನಗರದಲ್ಲಿ ಹೆಚ್ಚಾಗಿ ಅಪ್ರಾಪ್ತರು ವೀಲಿಂಗ್ ನಿಯಮ ಉಲ್ಲಂಘನೆಯಲ್ಲಿ ಭಾಗಿಯಾಗುತ್ತಿದ್ದು, ಸಂಚಾರ ವಿಭಾಗದಿಂದ ವೀಲಿಂಗ್ನಲ್ಲಿ ಭಾಗಿಯಾಗುತ್ತಿರುವ ಅಪ್ರಾಪ್ತರ ವಿರುದ್ಧ ದಾಖಲು ಮಾಡಿರುವ ಪ್ರಕರಣಗಳ ವಿವರ.
- 2023ರಲ್ಲಿ 242 ಒಟ್ಟು ವೀಲಿಂಗ್ ಪ್ರಕರಣ. ಅಪ್ರಾಪ್ತರು ಮತ್ತು ಪೋಷಕರ ವಿರುದ್ಧದ ಪ್ರಕರಣ 70.
- 2024ರಲ್ಲಿ 532 ಒಟ್ಟು ವೀಲಿಂಗ್ ಪ್ರಕರಣ. ಅಪ್ರಾಪ್ತರು ಮತ್ತು ಪೋಷಕರ ವಿರುದ್ಧದ ಪ್ರಕರಣ 120.
- 2025ರಲ್ಲಿ 646 ಒಟ್ಟು ವೀಲಿಂಗ್ ಪ್ರಕರಣ. ಅಪ್ರಾಪ್ತರು ಮತ್ತು ಪೋಷಕರ ವಿರುದ್ಧದ ಪ್ರಕರಣ 159.
ಅಪ್ರಾಪ್ತರುಗಳು ವಾಹನ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ವಾಹನಗಳನ್ನು ಚಲಾಯಿಸುತ್ತಿರುವುದನ್ನು ತಡೆಗಟ್ಟಲು ಅಪ್ರಾಪ್ತ ವಾಹನ ಸವಾರರು/ ಚಾಲಕರುಗಳ ವಿರುದ್ಧ ಐ.ಎಂ.ವಿ. ಕಾಯ್ದೆ ಹಾಗೂ ಬಿ.ಎನ್.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡುವ ವಿಶೇಷ ಕಾರ್ಯಾಚರಣೆಯನ್ನು ಬೆಂಗಳೂರು ಸಂಚಾರ ವಿಭಾಗದಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುತ್ತದೆ.
ಈ ವಿಶೇಷ ಕಾರ್ಯಾಚರಣೆಯು ಕೇವಲ ಅಪ್ರಾಪ್ತ ಚಾಲಕರುಗಳಿಗೆ ಸೀಮಿತವಾಗಿರದೆ, ಅವರುಗಳಿಗೆ ವಾಹನಗಳನ್ನು ಚಲಾಯಿಸಲು ಪ್ರೋತ್ಸಾಹಿಸುತ್ತಿರುವ ಪೋಷಕರುಗಳ ವಿರುದ್ಧವೂ ಕಾನೂನು ರೀತಾ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಅಪ್ರಾಪ್ತ ಚಾಲನೆಯು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಿ, ವಾಹನದ ಮಾಲೀಕರು ಅಥವಾ ಪೋಷಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿರುತ್ತದೆ.
ರಸ್ತೆ ಸುರಕ್ಷತೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕಾನೂನುಬದ್ಧ ವಯಸ್ಸು ಮುಟ್ಟುವ ಮುಂಚಿತವಾಗಿ ವಾಹನಗಳನ್ನು ಚಲಾಯಿಸಲು ನೀಡಬಾರದೆಂದು ಮನವಿ ಮಾಡುತ್ತಾ, ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಗಳು ಕೂಡ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಸಹಕರಿಸಬೇಕೆಂದು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಅಪ್ರಾಪ್ತ ವಯಸ್ಸಿನವರ ಚಾಲನೆಯನ್ನು ತಡೆಯಲು ಪೊಲೀಸರೊಂದಿಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ.

