ಕೋಲಾರ: ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಮಹಿಳೆ ಮೇಲೆ ಪತ್ನಿ ಆ್ಯಸಿಡ್ ದಾಳಿ ನಡೆಸಿದ ಘಟನೆ ಕೋಲಾರದ ಆಜಾದ್ ನಗರದಲ್ಲಿ ನಡೆದಿದೆ.
ಅಕ್ರಮ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ನಡೆದ ರಾಜೀಸಂಧಾನ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ಪತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮೇಲೆ ಪತ್ನಿ ಆ್ಯಸಿಡ್ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿತ ಮಹಿಳೆ ಮತ್ತು ಗಾಯಾಳು ಮಹಿಳೆ ಸಂಬಂಧಿಕರಾಗಿದ್ದಾರೆ. ಆರೋಪಿ ಮಹಿಳೆಯ ಪತಿ ಜೊತೆಗೆ ಗಾಯಾಳು ಮಹಿಳೆ ಅಕ್ರಮ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ. ಗಾಯಾಳು ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದು, ಸಂಸಾರವನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಆರೋಪಿ ಮಹಿಳೆಯ ಪತಿ ಹಣಕಾಸಿನ ನೆರವು ನೀಡುತ್ತಿದ್ದ. ಅದೇ ನೆಪದಲ್ಲಿ ಅಕ್ರಮ ಸಂಬಂಧ ಬೆಳೆಸಿದ್ದ ಎಂದು ಆರೋಪಿಸಲಾಗಿದೆ.
ಮೂರು ತಿಂಗಳ ಹಿಂದೆ ಇಬ್ಬರೂ ಓಡಿ ಹೋಗಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಇತ್ತೀಚೆಗೆ ಸಂಬಂಧಿಕರು ಪತ್ತೆ ಹಚ್ಚಿ ಕೋಲಾರಕ್ಕೆ ಕರೆತಂದಿದ್ದಾರೆ. ಬುಧವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ರಾಜೀ ಪಂಚಾಯಿತಿ ನಡೆಯುವಾಗ ಆಕ್ರೋಶಗೊಂಡ ಆರೋಪಿತ ಮಹಿಳೆ ತಾನು ಮೊದಲೇ ತಂದಿದ್ದ ಬಾತ್ರೂಮ್ ಕ್ಲೀನಿಂಗ್ ಆ್ಯಸಿಡ್ ಅನ್ನು ಮಹಿಳೆಯ ಮುಖಕ್ಕೆ ಎರಚಿ ಪರಾರಿಯಾಗಿದ್ದಾಳೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳು ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

