ಬೆಂಗಳೂರು: ಪ್ರತಿದಿನದ ಟ್ರಾಫಿಕ್ ಜಂಜಾಟದಲ್ಲಿ ಗಂಟೆಗಟ್ಟಲೆ ಕಳೆಯುವ ಬೆಂಗಳೂರಿಗರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವವರು ಹಾಗೂ ನಿತ್ಯದ ಪ್ರಯಾಣಕ್ಕಾಗಿ ಮೆಟ್ರೋ ಅವಲಂಬಿಸಿರುವ ಸಾವಿರಾರು ಜನರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಹೌದು. ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪಿಂಕ್ ಲೈನ್‌ನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಭೇಟಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಪಿಂಕ್ ಲೈನ್ ಮಾರ್ಗದ ವಿಶೇಷತೆಗಳೇನು?
ನಮ್ಮ ಮೆಟ್ರೋದ ಪಿಂಕ್ ಲೈನ್ ಒಟ್ಟು ಸುಮಾರು 21.25 ಕಿ.ಮೀ. ಉದ್ದವಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ.ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಇಂಟರ್‌ಚೇಂಜ್ ಆಗಿದೆ.
100 ಕಿ.ಮೀ. ಗಡಿ ದಾಟಲಿರುವ ನಮ್ಮ ಮೆಟ್ರೋ ಜಾಲ
ಪ್ರಸ್ತುತ ಬೆಂಗಳೂರಿನ ನಮ್ಮ ಮೆಟ್ರೋ ಕಾರ್ಯಾಚರಣೆಯ ಜಾಲ ಸುಮಾರು 96.1 ಕಿ.ಮೀ. ಉದ್ದವಿದೆ. ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬಳಿಕ ಮೆಟ್ರೋ ಜಾಲದ ಉದ್ದ 100 ಕಿ.ಮೀ. ಗಡಿ ದಾಟಲಿದೆ. ಇದರಿಂದ ಬೆಂಗಳೂರು ದೇಶದ ಅತಿ ಉದ್ದದ ಮೆಟ್ರೋ ಜಾಲ ಹೊಂದಿರುವ ನಗರಗಳಲ್ಲಿ ದೆಹಲಿಯ ನಂತರದ ಸ್ಥಾನ ಪಡೆಯಲಿದೆ ಎಂದು ವರದಿಯಾಗಿದೆ.
ಬರ ಪರಿಹಾರ ಕುರಿತು ಪ್ರಧಾನಿಯೊಂದಿಗೆ ಚರ್ಚೆಗೂ ಸಿದ್ಧತೆ
ಇದೇ ವೇಳೆ, ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಮಾಡುವ ವಿಚಾರವನ್ನೂ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ಸರ್ವಪಕ್ಷ ನಿಯೋಗದ ಭೇಟಿಗೆ ಸಮಯಾವಕಾಶ ನೀಡುವಂತೆ ಪ್ರಧಾನಿಯವರನ್ನು ಕೋರಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಪಿಂಕ್ ಲೈನ್ ಉದ್ಘಾಟನೆಯಿಂದ ಬೆಂಗಳೂರಿನ ಮೆಟ್ರೋ ಸಂಪರ್ಕ ಜಾಲ ಮತ್ತಷ್ಟು ವಿಸ್ತರಣೆಯಾಗಲಿದ್ದು, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭವಾದಂತೆ ನಾಗವಾರದವರೆಗಿನ ಸಂಪರ್ಕವೂ ಸುಧಾರಿಸಲಿದೆ.
ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
ಧಾರವಾಡ : ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಯುವನಿಧಿ ಪ್ಲಸ್ ಕಾರ್ಯಕ್ರಮವನ್ನು ರೂಪಿಸಿದೆ. ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಉಚಿತ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಪಡೆಯಲು ಯುವನಿಧಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಅಕೌಂಟ್ಸ್ ಎಕ್ಸಿಕ್ಯೂಟಿವ್, ಡಿಜಿಟಲ್ ಮಾರ್ಕೆಟಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಸ್ಯಾಪ್, ಐಓಟಿ, ಪಿಎಲ್‍ಸಿ ಪ್ರೋಗ್ರಾಮಿಂಗ್, ಕ್ಯಾಡ್-ಕ್ಯಾಮ್ ಮತ್ತು ಸಿಎನ್‍ಸಿ ಮುಂತಾದ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ. ತರಬೇತಿಯ ನಂತರ ಸ್ಥಳೀಯವಾಗಿ ಉತ್ತಮ ವೇತನದೊಂದಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ತರಬೇತಿಗಳು ನವೆಂಬರ್ 02 ರಿಂದ ಪ್ರಾರಂಭವಾಗಲಿವೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 30, 2026 ರೊಳಗಾಗಿ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836-2333159, 8123719773 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

