ಫರಿದಾಬಾದ್ : ಅಯೋಧ್ಯೆಯ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ಸಹ ಕೈದಿಯೊಬ್ಬ ಕೊಲೆ ಮಾಡಿದ್ದಾನೆ.
ಯಾರೀ ಅಬ್ದುಲ್ ರೆಹಮಾನ್?: ಉತ್ತರ ಪ್ರದೇಶದ ಮಿಲ್ಕಿಪುರ ನಿವಾಸಿಯಾದ ಅಬ್ದುಲ್ ರೆಹಮಾನ್ (20), 2025ರ ಮಾರ್ಚ್ನಲ್ಲಿ ಎರಡು ಹ್ಯಾಂಡ್ ಗ್ರೆನೇಡ್ಗಳೊಂದಿಗೆ ಬಂಧಿತನಾಗಿದ್ದ. ರಾಮಮಂದಿರದ ಮೇಲೆ ಸ್ಫೋಟ ನಡೆಸಲು ಈತ ಸಂಚು ರೂಪಿಸಿದ್ದ ಮತ್ತು ಪಾಕಿಸ್ತಾನದ ಐಎಸ್ಐ (ISI) ಜೊತೆ ಸಂಪರ್ಕ ಹೊಂದಿದ್ದ ಎಂದು ತನಿಖಾ ಸಂಸ್ಥೆಗಳು ಶಂಕಿಸಿದ್ದವು.
ಹತ್ಯೆ ನಡೆದದ್ದು ಹೇಗೆ ?: ಜೈಲಿನಲ್ಲಿದ್ದ ಕಾಶ್ಮೀರಿ ಮೂಲದ ಕೈದಿ ಅರುಣ್ ಚೌಧರಿ ಎಂಬಾತನ ಜೊತೆ ರೆಹಮಾನ್ ಭಾನುವಾರ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ, ರಾತ್ರಿ ಸುಮಾರು 2:30ರ ವೇಳೆಗೆ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ರೆಹಮಾನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ನನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಗುಜರಾತ್ ಮತ್ತು ಹರಿಯಾಣ ಎಸ್ಟಿಎಫ್ (STF) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದವು. ಈತನ ಮೊಬೈಲ್ನಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಹಾಗೂ ನಕ್ಷೆಗಳು ಪತ್ತೆಯಾಗಿದ್ದವು. ಪ್ರಸ್ತುತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಭದ್ರತಾ ಲೋಪದ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

