ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಲು ಪ್ರಮುಖ ಕಾರಣ ಎಸಿ ಬಳಕೆ. ಆದರೆ, ನಿಮ್ಮ ಎಸಿಯ ಉಷ್ಣತೆಯಲ್ಲಿ (Temperature) ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಬಿಲ್‌ನಲ್ಲಿ ಭರ್ಜರಿ ಶೇ. 30 ರಷ್ಟು ಉಳಿತಾಯ ಮಾಡಬಹುದು ಎಂದು ಸಂಶೋಧನೆಗಳು ತಿಳಿಸಿವೆ.
26 ಡಿಗ್ರಿ ಏಕೆ ಅತ್ಯುತ್ತಮ?
ಅನೇಕರು ರೂಮ್ ಬೇಗ ತಂಪಾಗಲಿ ಎಂಬ ಆತುರದಲ್ಲಿ ಎಸಿ ತಾಪಮಾನವನ್ನು 18 ಡಿಗ್ರಿಗೆ ಇಡುತ್ತಾರೆ. ಆದರೆ, ತಾಪಮಾನವನ್ನು ಎಷ್ಟು ಕಡಿಮೆ ಮಾಡುತ್ತೇವೋ ಅಷ್ಟು ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ.
ಶೇ. 6 ರಷ್ಟು ಉಳಿತಾಯ: ಎಸಿಯ ತಾಪಮಾನವನ್ನು ಪ್ರತಿ 1 ಡಿಗ್ರಿ ಹೆಚ್ಚಿಸಿದಾಗಲೂ ಸುಮಾರು ಶೇ. 6 ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ.
ಅಂದರೆ, ಅನಗತ್ಯವಾಗಿ ಅತಿ ಕಡಿಮೆ ತಾಪಮಾನಕ್ಕೆ ಇಡುವುದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತ.
18 ಡಿಗ್ರಿಗೆ ಇಟ್ಟರೆ ರೂಮ್ ಬೇಗ ತಂಪಾಗುತ್ತಾ?
ತಾಪಮಾನ ತುಂಬಾ ಕಡಿಮೆ ಇಟ್ಟಾಗ, ಎಸಿಯ ಕಂಪ್ರೆಸರ್ (Compressor) ದೀರ್ಘಕಾಲ ಕೆಲಸ ಮಾಡಬೇಕಾಗುತ್ತದೆ, ಇದು ವಿದ್ಯುತ್ ಬಳಕೆಯನ್ನು ವಿಪರೀತವಾಗಿ ಹೆಚ್ಚಿಸುತ್ತದೆ.
ಒಂದು ವೇಳೆ ಅತಿ ತಂಪು ಮಾಡಿ ಎಸಿ ಆಫ್ ಮಾಡಿದರೂ, ಕಿಟಕಿ ಅಥವಾ ಬಾಗಿಲುಗಳ ಸಣ್ಣ ಅಂತರದ ಮೂಲಕ ತಂಪು ಗಾಳಿ ಹೊರಹೋಗಿ ರೂಮ್ ಮತ್ತೆ ಬಿಸಿಯಾಗುತ್ತದೆ. ಇದರಿಂದ ನೀವು ಮಾಡಿದ ಹೆಚ್ಚಿನ ಕೂಲಿಂಗ್ ವ್ಯರ್ಥವಾಗುತ್ತದೆ.
ಆರಾಮದಾಯಕ ನಿದ್ರೆ ಮತ್ತು ಉಳಿತಾಯಕ್ಕೆ ಸ್ಮಾರ್ಟ್ ಟಿಪ್ಸ್:
ತಜ್ಞರ ಪ್ರಕಾರ, ರಾತ್ರಿ ಮಲಗುವಾಗ ಈ ಕೆಳಗಿನ ಕ್ರಮಗಳನ್ನು ಪಾಲಿಸುವುದು ಅತ್ಯಂತ ಸೂಕ್ತ:
26 ಡಿಗ್ರಿ ಸೆಟ್ ಮಾಡಿ: ಎಸಿ ತಾಪಮಾನವನ್ನು 26 ಡಿಗ್ರಿಯಲ್ಲಿ ಇರಿಸಿ. ಇದು ನೈಸರ್ಗಿಕವಾಗಿ ಮನುಷ್ಯನ ದೇಹಕ್ಕೆ ಆರಾಮದಾಯಕ.
ಟೈಮರ್ ಬಳಸಿ: ಎಸಿಯಲ್ಲಿ ಎರಡು ಗಂಟೆಗಳ ಟೈಮರ್ (Timer) ಸೆಟ್ ಮಾಡಿ.
ಫ್ಯಾನ್ ಆನ್ ಇರಲಿ: ಎಸಿ ಜೊತೆಗೆ ಸೀಲಿಂಗ್ ಫ್ಯಾನ್ ಅನ್ನು ಕಡಿಮೆ ವೇಗದಲ್ಲಿ ರನ್ ಮಾಡಿ. ಇದು ತಂಪು ಗಾಳಿಯು ರೂಮಿನ ಉದ್ದಗಲಕ್ಕೂ ಸಮನಾಗಿ ಹರಡಲು ಸಹಾಯ ಮಾಡುತ್ತದೆ.ಈ ಸಣ್ಣ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ಬಿಲ್ ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ಎಸಿಯ ಜೀವಿತಾವಧಿಯೂ ಹೆಚ್ಚುತ್ತದೆ.

