ಕಳೆದೆ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸತತ 17 ಬಾರಿ ಅನುಭವಿಸಿದ್ದ ಮುಖಭಂಗಕ್ಕೆ ಕೊನೆ ಎಳೆದಿತ್ತು.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 191 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್‌ಗಳ ಗೆಲುವು ಸಾಧಿಸಿತ್ತು.
ಈ ಮಹಾ ಗೆಲುವಿನ ಬಗ್ಗೆ ಜಿಯೊ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿರುವ ಆರ್‌ಸಿಬಿಯ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಈ ಹಿಂದಿನ ಹಾಗೆ ಆರ್‌ಸಿಬಿ ಕೇವಲ ಕೊಹ್ಲಿ ಮೇಲೆ ಅಲವಂಬಿತವಾಗಿಲ್ಲ, ಕೊಹ್ಲಿ ಸುತ್ತಲೂ ಹಲವಾರು ಫೈಟರ್‌ಗಳಿದ್ದಾರೆ ಎಂದಿದ್ದಾರೆ.
‘ಅದಕ್ಕೆ ಫೈನಲ್ ಪಂದ್ಯವೇ ಉತ್ತಮ ಉದಾಹರಣೆ. ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದ. ಆದರೆ ಪಟಿದಾರ್, ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ ಹಾಗೂ ರೊಮಾರಿಯೊ ಶೆಫರ್ಡ್ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ತಂಡ 190 ರನ್ ಕಲೆಹಾಕುವಲ್ಲಿ ಸಹಾಯ ಮಾಡಿ ಗೆಲುವಿಗೆ ಕಾರಣರಾದರು. ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ತಮ್ಮ ಕೊಡುಗೆ ನೀಡಿದರು’ ಎಂದು ಎಬಿಡಿ ಹೇಳಿಕೊಂಡಿದ್ದಾರೆ.
‘ಆಟಗಾರರು ಈ ರೀತಿ ಟೂರ್ನಿಯುದ್ದಕ್ಕೂ ಕೊಡುಗೆ ನೀಡುತ್ತಾ ಬಂದರೆ ಹಾಗೂ ಅದಕ್ಕೆ ತಕ್ಕನಾಗಿ ಬೌಲಿಂಗ್ ಸಿಕ್ಕರೆ ವಿರಾಟ್ ಕೊಹ್ಲಿಗೆ ತಾನೊಬ್ಬನೇ ತಂಡದ ಭಾರವನ್ನು ಹೊತ್ತಿದ್ದೇನೆ ಎನಿಸುವುದಿಲ್ಲ. ಅತನ ಸುತ್ತಲೂ ಫೈಟರ್‌ಗಳ ದಂಡೇ ಇದೆ. ಕಳೆದ ಬಾರಿ ಕಣಕ್ಕಿಳಿದಿದ್ದ ತಂಡವೇ ಇರುವುದರಿಂದ ಈ ಬಾರಿಯೂ ಸಹ ಅವರು ಚೆನ್ನಾಗಿ ಪ್ರದರ್ಶನ ನೀಡಲಿದ್ದಾರೆ’ ಎಂದು ಎಬಿಡಿ ಹೇಳಿದ್ದಾರೆ.

