ಪಂಜಾಬ್’ನ ಜಲಂಧರ್’ನಲ್ಲಿ ಶುಕ್ರವಾರದಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಲಕ್ಕಿ ಒಬೆರಾಯ್ ಅವರನ್ನು ಹಗಲು ಹೊತ್ತಿನಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಗುರುದ್ವಾರದ ಹೊರಗಡೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಜಲಂಧರ್ನ ಮಾಡೆಲ್ ಟೌನ್ನಲ್ಲಿರುವ ಗುರುದ್ವಾರದ ಹೊರಗಡೆ ಈ ಘಟನೆ ಸಂಭವಿಸಿದೆ. ಲಕ್ಕಿ ಒಬೆರಾಯ್ ಅವರು ತಮ್ಮ ಕಾರನ್ನು ಪಾರ್ಕ್ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಹಂತಕರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ.ಗುಂಡಿನ ದಾಳಿ: ಪ್ರಾಥಮಿಕ ಮಾಹಿತಿಯ ಪ್ರಕಾರ, ಒಬೆರಾಯ್ ಅವರ ಮೇಲೆ ಹಲವಾರು ಸುತ್ತು ಗುಂಡು ಹಾರಿಸಲಾಗಿದ್ದು, ಕಾರಿನಲ್ಲಿದ್ದ ಅವರಿಗೆ ಐದು ಗುಂಡುಗಳು ತಗುಲಿವೆ.ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪೊಲೀಸ್ ತನಿಖೆ:
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಆರಂಭಿಸಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಲಕ್ಕಿ ಒಬೆರಾಯ್ ಅವರ ಪತ್ನಿ ಈ ಹಿಂದೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆಗಳ (ಮುನ್ಸಿಪಲ್) ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಅವರು ಜಯಗಳಿಸಿರಲಿಲ್ಲ. ಜಲಂಧರ್ನಲ್ಲಿ ನಡೆದ ಒಬೆರಾಯ್ ಅವರ ಹಗಲು ಹೊತ್ತಿನ ಹತ್ಯೆಯನ್ನು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆಡಳಿತದಲ್ಲಿ ಪಂಜಾಬ್ನ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ “ಕುಸಿದಿದೆ” ಎಂದು ಅವರು ಆರೋಪಿಸಿದ್ದಾರೆ.

