ನವದೆಹಲಿ: ಆಧಾರ್ ಕಾರ್ಡ್ ಅತ್ಯಂತ ಸುರಕ್ಷಿತವಾಗಿದೆ. ಡೇಟಾ ವಿಚಾರವಾಗಿ ಯಾವುದೇ ಉಲ್ಲಂಘನೆಯಾಗಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಡೇಟಾಬೇಸ್ ನಿಂದ ಆಧಾರ್ ಕಾರ್ಡ್ ಹೊಂದಿದವರ ಡೇಟಾ ವಿಚಾರವಾಗಿ ಇದುವರೆಗೆ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ್, ಸರ್ಕಾರ ರೂಪಿಸಿದ ಬಲವಾದ ತಾಂತ್ರಿಕ ಮತ್ತು ಸಾಂಸ್ಥಿಕ ಸುರಕ್ಷತೆಗಳಿಂದಾಗಿ ಆಧಾರ್ ಸುರಕ್ಷಿತವಾಗಿ ಉಳಿದಿದೆ. ದೇಶದಲ್ಲಿ ಸುಮಾರು 134 ಕೋಟಿ ಮಂದಿ ಆಧಾರ್ ಕಾರ್ಡ್ ಹೊಂದಿದ್ದು, ಇದು ವಿಶ್ವದ ಅತಿ ದೊಡ್ಡ ಬಯೋ ಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದೆ. 16,000 ಕೋಟಿಗೂ ಹೆಚ್ಚು ದೃಢೀಕರಣ ವಹಿವಾಟುಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ.
ವೈಯಕ್ತಿಕ ಡೇಟಾ ರಕ್ಷಿಸಲು ಯುಐಡಿಎಐ ಕಟ್ಟುನಿಟ್ಟಿನ ಸುರಕ್ಷಿತ ನಿಯಮಗಳನ್ನು ಅಳವಡಿಸಿಕೊಂಡಿದೆ. ಅನೇಕ ಹಂತಗಳಲ್ಲಿ ಡೇಟಾಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಸುಧಾರಿತ ಎನ್ ಕ್ರಿಪ್ಷನ್ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿರುವುದರಿಂದ ಸೋರಿಕೆಯಾಗುವುದು ಸಾಧ್ಯವಿಲ್ಲ. ಈ ಪ್ರಕ್ರಿಯೆಗಳು ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರದ ನಿರಂತರ ಕಣ್ಗಾವಲಿನಲ್ಲಿ ನಡೆಯುತ್ತದೆ ಎಂದು ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.

