ಬೆಂಗಳೂರು: ಸಾಮಾನ್ಯವಾಗಿ ಕಳ್ಳತನ, ಜಗಳ ಅಥವಾ ಅಪಘಾತಗಳ ಸಂದರ್ಭದಲ್ಲಿ ಜನರು ಪೊಲೀಸರಿಗೆ ಕರೆ ಮಾಡುತ್ತಾರೆ. ಆದರೆ, ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ನಾಯಿಗಳ ಕಾಟದಿಂದ ನಿದ್ರೆ ಬರುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ವಿಶಿಷ್ಟ ಘಟನೆ ನಡೆದಿದೆ.
ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿ ಮಹಿಳೆಯೊಬ್ಬರು ಈ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ನಾಯಿಗಳನ್ನು ಓಡಿಸಿದ್ದಾರೆ.
ನಡೆದಿದ್ದೇನು ?
ಸಂಪಿಗೆಹಳ್ಳಿ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವ ಮಹಿಳೆಯೊಬ್ಬರಿಗೆ ರಾತ್ರಿ ವೇಳೆ ಬೀದಿ ನಾಯಿಗಳ ಸತತ ಬೊಗಳುವಿಕೆಯಿಂದ ತೀವ್ರ ತೊಂದರೆಯಾಗಿತ್ತು. ನಾಯಿಗಳ ಅಬ್ಬರಕ್ಕೆ ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ, ಬೇರೆ ದಾರಿ ಕಾಣದೆ ಅವರು ತಡರಾತ್ರಿ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಸಹಾಯ ಕೋರಿದ್ದರು.
ನಿಯಂತ್ರಣ ಕೊಠಡಿಯಿಂದ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾದರು.ಹತ್ತಿರದಲ್ಲೇ ಗಸ್ತಿನಲ್ಲಿದ್ದ ‘ಹೊಯ್ಸಳ’ ವಾಹನದ ಸಿಬ್ಬಂದಿ ತಕ್ಷಣವೇ ಮಹಿಳೆಯ ಅಪಾರ್ಟ್ಮೆಂಟ್ ಬಳಿ ಧಾವಿಸಿದರು. ಅಪಾರ್ಟ್ಮೆಂಟ್ ಸುತ್ತಮುತ್ತ ಗುಂಪು ಸೇರಿ ಬೊಗಳುತ್ತಿದ್ದ ನಾಯಿಗಳನ್ನು ಪೊಲೀಸರು ಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾದರು. , ಜನರ ಇಂತಹ ಸಣ್ಣಪುಟ್ಟ ದೈನಂದಿನ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

