ನೆಲಮಂಗಲ : ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಭೀಕರ ದುರಂತಕ್ಕೆ ಕಾರಣವಾಗಿದೆ. ಹಬ್ಬ ಮುಗಿಸಿ ದೇವರ ದರ್ಶನಕ್ಕೆಂದು ತೆರಳುತ್ತಿದ್ದ ವೇಳೆ ಕಂಟೈನರ್ ಡಿಕ್ಕಿಯಾಗಿ ನಾಲ್ಕು ವರ್ಷದ ಪುಟ್ಟ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ನಡೆದಿದೆ.
ಘಟನೆಯ ವಿವರ
ಲಾವಣ್ಯ ಎಂಬುವವರು ತಮ್ಮ 4 ವರ್ಷದ ಮಗಳು ನಿಶಿಕಾಳ ಕೈಹಿಡಿದುಕೊಂಡು ರಸ್ತೆ ದಾಟುತ್ತಿದ್ದರು. ಯುಗಾದಿ ಹಬ್ಬ ಮುಗಿದಿದ್ದರಿಂದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವ ಹಂಬಲದಲ್ಲಿ ತಾಯಿ-ಮಗಳು ಸಾಗುತ್ತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಕಂಟೈನರ್ ಅನಿರೀಕ್ಷಿತವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಗು ನಿಶಿಕಾ ಕಂಟೈನರ್ ಚಕ್ರದ ಅಡಿ ಸಿಲುಕಿ ತಾಯಿಯ ಕಣ್ಣೆದುರೇ ರಕ್ತದ ಮಡುವಿನಲ್ಲಿ ಉಸಿರುಚೆಲ್ಲಿದ್ದಾಳೆ. ಮಗಳು ಕಣ್ಣಮುಂದೆಯೇ ಸಾವನ್ನಪ್ಪಿದ್ದನ್ನು ಕಂಡು ತಾಯಿ ಲಾವಣ್ಯ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಭೇಟಿ
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಂಟೈನರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

