ಬಾಗಲಕೋಟೆ: ಕಳೆದ ವಾರವಷ್ಟೇ ಕೆಜಿಗೆ 50 ರೂ.ವರೆಗೂ ದೊರೆಯುತ್ತಿದ್ದ ಟೊಮೆಟೊ ಏಕಾಏಕಿ 100 ರೂಪಾಯಿ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಅಮೀನಗಡದಲ್ಲಿ ಟೊಮೆಟೊ ಸೇರಿದಂತೆ ತರಕಾರಿ, ಸೊಪ್ಪು ದರ ತೀವ್ರ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆಯಾದ ಕಾರಣ ದರ ಹೆಚ್ಚಾಗಿದೆ. ಹೀರೆಕಾಯಿ ಕೆಜಿಗೆ 120 ರೂ., ಸೌತೆಕಾಯಿ 120 ರೂ., ಬೀನ್ಸ್ 160 ರೂ., ಟೊಮೆಟೊ 100 ರೂಪಾಯಿಗೆ ಮಾರಾಟವಾಗಿದೆ.
ಮಳೆ, ರೋಗ ಬಾಧೆ ಸೇರಿ ನಾನಾ ಕಾರಣಗಳಿಂದ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶನಿವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದರಿಂದ ತರಕಾರಿ ಸೇರಿ ಅಗತ್ಯ ವಸ್ತುಗಳ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಟೊಮೆಟೊ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಜನ ಹುಣಸೆಹಣ್ಣು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ.