ಮಲಯಾಳಂ ಚಿತ್ರರಂಗದ ಅತ್ಯಂತ ದುಬಾರಿ ನಟರಲ್ಲಿ ಫಹಾದ್ ಫಾಜಿಲ್ ಕೂಡ ಒಬ್ಬರು. ಪುಷ್ಪಾ ಚಿತ್ರದ ನಂತರ ಅವರ ಫ್ಯಾನ್ ಫಾಲೋಯಿಂಗ್ ವೇಗವಾಗಿ ಹೆಚ್ಚುತ್ತಿದೆ. ಆದರೆ ತಮ್ಮ ಆರೋಗ್ಯದ ಕುರಿತಾಗಿ ಇತ್ತೀಚೆಗೆ ನಟ ಫಹಾದ್ ಬಿಚ್ಚಿಟ್ಟಿರುವ ಸಂಗತಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಫಹಾದ್ ಎಡಿಎಚ್‌ಡಿ ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಾರಂತೆ. ಇದು ಸಾಮಾನ್ಯವಾಗಿ ಬಾಲ್ಯದಲ್ಲಿ ಸಂಭವಿಸುತ್ತದೆ, ಆದರೆ ಅವರು 41ನೇ ವಯಸ್ಸಿನಲ್ಲಿ ಇದನ್ನು ಎದುರಿಸುತ್ತಿದ್ದಾರೆ. ಎಡಿಎಚ್‌ಡಿ ಎಂದರೇನು? ಅದಕ್ಕೆ ಪರಿಹಾರ ಏನಿದೆ ಎಂಬುದನ್ನು ತಿಳಿಯೋಣ.
ADHD ಎಂದರೇನು?
ಇದನ್ನು ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಇದು ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಈ ಅಸ್ವಸ್ಥತೆಯು ಸಾಮಾನ್ಯವಾಗಿ ಬಾಲ್ಯದಲ್ಲಿ ಪ್ರಾರಂಭವಾಗುತ್ತದೆ. ಕೆಲವರು ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ, ಇನ್ನು ಕೆಲವರು ತಮ್ಮ ಜೀವನದುದ್ದಕ್ಕೂ ಇದೇ ಸ್ಥಿತಿಯೊಂದಿಗೆ ಇರುತ್ತಾರೆ.
ADHD ಸಮಸ್ಯೆ ಇರುವವರು ನರ ವೈವಿಧ್ಯತೆಯನ್ನು ಹೊಂದಿರುತ್ತಾರೆ. ಸರಳವಾಗಿ ಹೇಳುವುದಾದರೆ ಅವರ ಮೆದುಳು ವಿಭಿನ್ನವಾಗಿ ಬೆಳೆಯುತ್ತದೆ. ADHD ಇರುವವರ ಮೆದುಳಿನ ಕೆಲವು ಭಾಗಗಳಲ್ಲಿ ಅಸಮ ಚಟುವಟಿಕೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಯೋಜನೆ, ತರ್ಕ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ಈ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರು ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ. ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೆಚ್ಚು ಸಮಯ ಕಾಯುವ ಸಹನೆ ಅವರಲ್ಲಿ ಇರುವುದಿಲ್ಲ. ದೀರ್ಘಕಾಲದವರೆಗೆ ಇತರರು ಹೇಳುವುದನ್ನು ಕೇಳುವುದು ಕೂಡ ಅವರಿಗೆ ಕಷ್ಟವಾಗುತ್ತದೆ.
ADHD ಲಕ್ಷಣಗಳು…
ವಿಪರೀತ ಕೋಪ
ವಿಷಯಗಳನ್ನು ಸಂಘಟಿಸಲು ತೊಂದರೆ
ಸಮಯ ನಿರ್ವಹಣೆಯಲ್ಲಿ ಸಮಸ್ಯೆ
ಗಮನ ಕೇಂದ್ರೀಕರಿಸಲು ಅಸಾಧ್ಯ
ಬಹುಕಾರ್ಯದಲ್ಲಿ ತೊಂದರೆ
ಪ್ರತಿ ಕೆಲಸದಲ್ಲೂ ಆತುರ ಅಥವಾ ಚಡಪಡಿಕೆ
ವಿಷಯಗಳನ್ನು ಸರಿಯಾಗಿ ಯೋಜಿಸಲು ಅಸಾಧ್ಯ
ಮೂಡ್ ಸ್ವಿಂಗ್
ಬೇಗ ನಿರಾಸೆಗೊಳ್ಳುವುದು
ಒತ್ತಡವನ್ನು ನಿಭಾಯಿಸಲು ತೊಂದರೆ
ಎಡಿಎಚ್‌ಡಿಗೆ ಚಿಕಿತ್ಸೆ ಏನು?
ಎಡಿಎಚ್‌ಡಿ ಬಾಲ್ಯದಲ್ಲಿಯೇ ಪತ್ತೆಯಾದರೆ, ಅದನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ ವಯಸ್ಕರಲ್ಲಿ ಈ ಅಸ್ವಸ್ಥತೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಔಷಧಿ ಮತ್ತು ಟಾಕ್ ಥೆರಪಿಯ ಸಹಾಯದಿಂದ ಈ ಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಿದೆ.
ಎಡಿಎಚ್‌ಡಿ ಆನುವಂಶಿಕವೆಂದು ಹೇಳಲಾಗುತ್ತದೆ. ರಕ್ತ ಸಂಬಂಧದಲ್ಲಿ ಯಾರಾದರೂ ಈ ಅಸ್ವಸ್ಥತೆಯನ್ನು ಹೊಂದಿದ್ದರೆ ಅದು ಬರುವ ಅಪಾಯ ಹೆಚ್ಚು. ಗರ್ಭಾವಸ್ಥೆಯಲ್ಲಿ ತಾಯಿ ಸಿಗರೇಟ್, ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಿದ್ದರೆ, ಮಕ್ಕಳಲ್ಲಿ ಈ ಸಮಸ್ಯೆ ಬರಬಹುದು. ಅಲ್ಲದೆ ಅಕಾಲಿಕವಾಗಿ ಜನಿಸಿದ ಮಕ್ಕಳಲ್ಲಿ ಎಡಿಎಚ್‌ಡಿ ಬೆಳವಣಿಗೆಯ ಅಪಾಯವಿರುತ್ತದೆ. ಇದಲ್ಲದೆ ಹಳೆಯ ಕಟ್ಟಡಗಳು, ಪೈಪುಗಳು ಅಥವಾ ಬಣ್ಣಗಳಲ್ಲಿ ಕಂಡುಬರುವ ವಿಷಗಳು ಸಹ ಈ ಅಸ್ವಸ್ಥತೆಯನ್ನು ಉಂಟುಮಾಡುತ್ತವೆ.