ಬೆಂಗಳೂರು : ಬೆಂಗಳೂರಿನ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಹಾಗೂ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಬಂಧಿತ ಐವರ ಪೈಕಿ ಮೂವರು ಡ್ರಗ್ ಪೆಡ್ಲರ್ ಗಳು ಎಂದು ಗುರುತಿಸಲಾಗಿದೆ.
ಸಿಂಗೇನಾ ಅಗ್ರಹಾರದ ಫಾರಂ ಹೌಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಪೊಲೀಸರ ದಾಳಿ ವೇಳೆ 45 ಗ್ರಾಂ ಡ್ರಗ್ಸ್, MDMA, ಕೊಕೆನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರು, ಮಾಡೆಲ್ಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಇದ್ದರು. ಆಂಧ್ರಪ್ರದೇಶ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.