ಲಖನೌ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅಮೇಥಿಯಿಂದಲೂ ಸ್ಪರ್ಧೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ದೆ ಬೆನ್ನಲ್ಲೇ ಅಮೇಥಿ, ರಾಯಬರೇಲಿ ಕ್ಷೇತ್ರಗಳಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿದ ರಾಹುಲ್ ಗಾಂಧಿ, ನನ್ನ ಸ್ಪರ್ಧೆ ಬಗ್ಗೆ ಸಿಇಸಿ ಸಭೆ ನಿರ್ಧರಿಸುತ್ತದೆ. ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ. ಪಕ್ಷ ಏನು ಸೂಚನೆ ನೀಡುತ್ತದೆ ಆ ಆದೇಶವನ್ನು ನಾನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಪರ್ಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಒಮ್ಮೊಮ್ಮೆ ಪ್ರಧಾನಿ ಮೋದಿ ಆಗಸದಲ್ಲಿ ಹಾರಾಡುತ್ತಾರೆ. ಮತ್ತೊಮ್ಮೆ ಸಮುದ್ರದ ಆಳದಲ್ಲಿ ಈಜಾಡುತ್ತಾರೆ. ಬಿಜೆಪಿಗೆ ಸಾವಿರಾರು ಕೋಟಿ ಹಣವನ್ನು ನೀಡಲಾಗಿದೆ. ಚುನಾವಣಾ ಬಾಂಡ್ ಮೂಲಕ ಹಣ ನೀಡಲಾಗಿದೆ ಎಂದು ಗುಡುಗಿದರು.