ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಇಂದು ತಮ್ಮ ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಮನಗರದಲ್ಲಿ ಮಂಜುನಾಥ್ ಅವರು ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಬೃಹತ್ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಮಣಿಸಲು ಬಿಜೆಪಿ, ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ಚುನಾವಣಾ ರಣಕಹಳೆಯನ್ನು ಮೊಳಗಿಸಿದ್ದು, ಬುಧವಾರದಂದು ರೋಡ್ ಶೋ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಡಾ. ಸಿ.ಎನ್. ಮಂಜುನಾಥ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ.