ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಮೊಬೈಲ್ ಬಳಸುತ್ತಿದ್ದಾರೆ. ಸರಿಯಾಗಿ ಮಾತನಾಡಲು ಸಹ ಬಾರದ ಪುಟ್ಟ ಕಂದಮ್ಮಗಳಿಗೂ ಈಗ ಮೊಬೈಲ್ ಬೇಕು. ಮಕ್ಕಳಲ್ಲಿ ಈ ರೀತಿ ಮೊಬೈಲ್ ಹುಚ್ಚು ಬೆಳೆಯಲು ಪೋಷಕರೇ ಕಾರಣ.
ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 5 ರಿಂದ 16 ವರ್ಷ ವಯಸ್ಸಿನ ಸುಮಾರು 60 ಪ್ರತಿಶತದಷ್ಟು ಮಕ್ಕಳು ಡಿಜಿಟಲ್ ವ್ಯಸನದ ಬಲಿಪಶುಗಳಾಗುವ ಎಲ್ಲಾ ಸಾಧ್ಯತೆಗಳಿವೆ. 1000 ಪೋಷಕರು ವರದಿ ಮಾಡಿದ ಮಕ್ಕಳ ವರ್ತನೆಯಿಂದ ಇದನ್ನು ಅಂದಾಜಿಸಲಾಗಿದೆ.
ಕಳಪೆ ನಿದ್ರೆಯ ಗುಣಮಟ್ಟ, ಕಡಿಮೆ ದೈಹಿಕ ಚಟುವಟಿಕೆ, ಕಡಿಮೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಪಾಯಗಳನ್ನು ಮೊಬೈಲ್‌ನಂತಹ ಡಿಜಿಟಲ್ ಮಾಧ್ಯಮಗಳ ಸ್ಕ್ರೀನ್ ಸೃಷ್ಟಿಸುತ್ತಿದೆ. ಈ ಸಮಸ್ಯೆಯನ್ನು ಹೈಲೈಟ್ ಮಾಡುವುದು ಸಮೀಕ್ಷೆಯ ಗುರಿಯಾಗಿದೆ.
ಒಂದು ದಿನದಲ್ಲಿ ಎಷ್ಟು ಸಮಯ ಮೊಬೈಲ್ ಬಳಸಬೇಕು?
ಆರೋಗ್ಯ ತಜ್ಞರು ದಿನಕ್ಕೆ 2-3 ಗಂಟೆಗಳ ಕಾಲ ಮಾತ್ರ ಮೊಬೈಲ್ ಬಳಸಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಸ್ಕ್ರೀನ್ ಸಣ್ಣದಿರುವುದರಿಂದ ಇದು ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದ ಮಿತಿ ವಯಸ್ಕರಿಗೆ. ಚಿಕ್ಕ ಮಕ್ಕಳು ಮೊಬೈಲ್ ಬಳಸದೇ ಇರುವುದು ಉತ್ತಮ.
ಡಿಜಿಟಲ್ ಚಟ ಎಂದರೇನು?
ಡಿಜಿಟಲ್ ಚಟವು ಉದ್ವೇಗ ನಿಯಂತ್ರಣ ಅಸ್ವಸ್ಥತೆಯಾಗಿದೆ. ಇದನ್ನು ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಇದರಲ್ಲಿ ಡಿಜಿಟಲ್ ಸಾಧನಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದಂತಹ ವೇದಿಕೆಗಳನ್ನು ಬಳಸುವ ಅಗತ್ಯವನ್ನು ಅನುಭವಿಸಲಾಗುತ್ತದೆ.
ಮಗು ಡಿಜಿಟಲ್ ವ್ಯಸನಿಯಾಗುತ್ತಿದೆ ಎಂದು ಗುರುತಿಸುವುದು ಹೇಗೆ?
ಇಡೀ ದಿನ ಫೋನ್‌ನಲ್ಲಿ ಇರುವುದು
ಮೊಬೈಲ್ ಕೊಡದಿದ್ದರೆ ಕೋಪ ಅಥವಾ ಅಸಮಾಧಾನ ವ್ಯಕ್ತಪಡಿಸುವುದು
ಇತರ ಮಕ್ಕಳೊಂದಿಗೆ ಹೊರಗೆ ಆಟವಾಡಲು ಅನಾಸಕ್ತಿ
ಗುಟ್ಟಾಗಿ ಫೋನ್ ಬಳಸುವುದು
ಫೋನ್ ಬಳಸಲು ನೆಪ ಹೇಳುವುದು
ಫೋನ್ ಅಥವಾ ಟಿವಿ ನೋಡುತ್ತ ಊಟ ಮಾಡುವುದು
ಮಗುವಿನ ಮೊಬೈಲ್ ಚಟ ಬಿಡಿಸುವುದು ಹೇಗೆ?
ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿರಿಸಲು ಹೊರಾಂಗಣ ಆಟಗಳು ಮತ್ತು ಚಟುವಟಿಕೆಗಳಲ್ಲಿ ಬ್ಯುಸಿಯಾಗಿಡಬೇಕು. ಮಗುವಿನ ಮುಂದೆ ಪೋಷಕರು ಕೂಡ ಹೆಚ್ಚು ಮೊಬೈಲ್ ಬಳಸಬಾರದು. ಮನೆಯಲ್ಲಿ ಮಗುವಿಗೆ ಹೊಸ ಮತ್ತು ಸೃಜನಶೀಲ ಕೌಶಲ್ಯಗಳನ್ನು ಕಲಿಸಿ.