HomeKarnatakaಕೇಂದ್ರ, ರಾಜ್ಯ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ

ಕೇಂದ್ರ, ರಾಜ್ಯ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ

ಬಳ್ಳಾರಿ : ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿವಿಧ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ ಅಧಿಕಾರಿಗಳು ಮತ್ತು ಖಾಸಗಿ ವಲಯಗಳ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಹೇಳಿದರು.

ಮಂಗಳವಾರ, ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅಂಚೆ ಮತಪತ್ರ ವಿತರಣೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆಯು ಪ್ರಜಾಪ್ರಭುತ್ವ ಹಬ್ಬವಿದ್ದಂತೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣಾ ಆಯೋಗವು ಅಗತ್ಯ ಸೇವೆಗಳ ಇಲಾಖೆಗಳಿಗೆ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲಾಖೆ ಮತ್ತು ಆಕಾಶವಾಣಿ, ಬಿ.ಎಸ್.ಎನ್.ಎಲ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಅಂಚೆ ಮತಚೀಟಿ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಫಾರಂ-12 ಅರ್ಜಿ ನೀಡಲಾಗುತ್ತದೆ. ಅದರಲ್ಲಿ ತಮ್ಮ ಹೆಸರು, ಮತದಾರ ಗುರುತಿನ ಸಂಖ್ಯೆ, ಆಯಾ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರ ಹೆಸರು, ಮತ ಚಲಾಯಿಸುವ ಮತಗಟ್ಟೆ ಸಂಖ್ಯೆ ಹಾಗೂ ಇತರೆ ಮಾಹಿತಿ ಭರ್ತಿ ಮಾಡಿ ನೀಡಬೇಕು ಎಂದು ತಿಳಿಸಿದರು.

ನಮೂನೆ-12 ಭರ್ತಿ ಮಾಡಿ ನೀಡುವವರಿಗೆ ಡಿಕ್ಲರೇಷನ್ ಪಡೆಯಲಾಗುತ್ತದೆ. ನಂತರ ಅಂಚೆ ಮತಚೀಟಿಯನ್ನು ವಿತರಣೆ ಮಾಡಿ ಮತದಾನಕ್ಕೆ ಅಂಚೆ ಮತದಾನ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡುವ ಮೂಲಕ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದರು.

ಇತರೆ ಜಿಲ್ಲೆಯ ಮತದಾರರಾಗಿದ್ದಲ್ಲಿ ನಮೂನೆ-12 ಭರ್ತಿ ಮಾಡಿ ಆಯಾ ಜಿಲ್ಲೆಯ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅವರು ನೀಡಿದ ವಿಳಾಸಕ್ಕೆ ಅಂಚೆ ಮೂಲಕ ಮತಪತ್ರವನ್ನು ಕಳುಹಿಸಲಿದ್ದು, ಮತದಾನ ಮಾಡಿ ಅಂಚೆ ಮೂಲಕ ಮತ್ತೆ ಕಳುಹಿಸಿಕೊಡಬೇಕಾಗುತ್ತದೆ ಎಂದರು. ಇಲಾಖಾವಾರು ಅಂಚೆ ಮತದಾನಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿದ ಅವರು ಯಾವುದೇ ಕಾರಣಕ್ಕೂ ಮತದಾನದಿಂದ ಹೊರಗುಳಿಯಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೋಸ್ಟಲ್ ಬ್ಯಾಲೆಟ್ ನೋಡೆಲ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular