ಬೆಂಗಳೂರು: ನೋಂದಣಿ ಇಲಾಖೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಜಮೀನು, ನಿವೇಶನ, ಮನೆ ಖರೀದಿ, ಬ್ಯಾಂಕುಗಳಲ್ಲಿ ಸಾಲ ಪತ್ರಗಳ ನೊಂದಣಿಗೆ ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿ ಗಳಿಗೆ ಅಲೆಯಬೇಕಿಲ್ಲ. ಮಾರಾಟ ಮಾಡುವ ಏಜೆನ್ಸಿಗಳು ಮತ್ತು ಬ್ಯಾಂಕುಗಳಲ್ಲಿಯೇ ಆನ್ಲೈನ್ ನೋಂದಣಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಡಿಎ, ಮೂಡಾ, ಕೆಐಎಡಿಬಿ, ಕೆಎಸ್ಎಸ್ಐಡಿಸಿ, ನಗರಾಭಿವೃದ್ಧಿ ಪ್ರಾಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಕೊಳಗೇರಿ ಅಭಿವೃದ್ಧಿ ಮಂಡಳಿಗಳಲ್ಲಿ ಮನೆ ಇಲ್ಲವೇ ನಿವೇಶನ ಖರೀದಿ ಮಾಡಿದಾಗ ಆಯಾ ಸಂಸ್ಥೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು.
ಸೇಲ್ ಡೀಡ್ ಮತ್ತು ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ದಾಖಲೆಗಳು ಆನ್ಲೈನ್ ನಲ್ಲಿ ಲಭ್ಯವಾಗಲಿವೆ. ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ.
ಅಲ್ಲದೇ, ಶೆಡ್ಯೂಲ್ ಬ್ಯಾಂಕ್ ಗಳಲ್ಲಿ ಸಾಲ ನೀಡುವ ಸಂದರ್ಭದಲ್ಲಿ ನೋಂದಣಿಯನ್ನು ಅದೇ ಬ್ಯಾಂಕ್ ನಲ್ಲಿ ಮಾಡುವ ವ್ಯವಸ್ಥೆ ತರಲಾಗುವುದು. ಶೆಡ್ಯೂಲ್ ಬ್ಯಾಂಕ್ ಗಳಲ್ಲಿ ಮಾತ್ರ ಈ ವ್ಯವಸ್ಥೆ ಸದ್ಯಕ್ಕೆ ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳಿಗೂ ವಿಸ್ತರಿಸಲಾಗುತ್ತದೆ. ಆನ್ಲೈನ್ ನಲ್ಲಿ ದಾಖಲೆ ಅಪ್ಲೋಡ್ ಮಾಡುವ ವಿಡಿಯೋ ಚಿತ್ರೀಕರಣ ಮಾಡುವ ವ್ಯವಸ್ಥೆ ಇರಲಿದೆ.
ಪ್ರತಿ ನೋಂದಣಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಲಾಗುವುದು. ಯಾರದೋ ಜಮೀನಿಗೆ ಬೇರೆ ಮಾಲೀಕರು ಸೃಷ್ಟಿಯಾಗಿ ತಪ್ಪು ಮಾಹಿತಿ, ದಾಖಲೆ ನೀಡಿ ಆಸ್ತಿಗಳನ್ನು ನೋಂದಣಿ ಮಾಡಿಸಲಾಗುತ್ತಿದೆ. ಇದನ್ನು ತಪ್ಪಿಸಲು ಆಸ್ತಿ ಮಾರಾಟಗಾರ, ಖರೀದಿದಾರ, ಸಾಕ್ಷಿಗಳ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಿದೆ. ಗುರುತಿನ ಚೀಟಿಯಾಗಿ ಡಿಎಲ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪಡೆಯಬಹುದು. ಆಧಾರ್ ಬಳಕೆ ಕಡ್ಡಾಯ ನಿರ್ಧಾರಕ್ಕೆ ಕೇಂದ್ರಕ್ಕೆ ಅನುಮತಿ ಪಡೆಯಲಾಗುವುದು. ರೇರಾ ಅನುಮೋದಿತ ಯೋಜನೆಗಳಲ್ಲಿ ನೋಂದಣಿ ಅದೇ ಕಚೇರಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.